

ಗೋಣಿಕೊಪ್ಪ: ದೇಶ ಸಂವಿಧಾನ ನೀಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಕಾನೂನಿನ ಪರಿಜ್ಞಾನ ಎಲ್ಲರಿಗೂ ಸಿಗುವಂತೆ ಮಾಡಿದರು ಎಂದು ದಕ್ಷ್ಷಿಣ ಕೊಡಗಿನ ನಿಟ್ಟೂರು ಗ್ರಾಪಂ ಉಪಾಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣದ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಕುರಿತು ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೋಷಿತ ಸಮುದಾಯದ ಧ್ವನಿಯಾಗಿದ್ದ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಕಾನೂನಿನ ಬಗ್ಗೆ ತಿಳಿಸಿದ್ದಾರೆ. ಇಂದು ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಅಂಬೇಡ್ಕರ್ ಅವರು ತಮ್ಮ ಶಿಕ್ಷಣದ ಮೂಲಕ ಕ್ರಾಂತಿ ಮಾಡಿಸಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಗಿರಿಜನರು ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರದ ವತಿಯಿಂದ ಸಿಗುವ ಪ್ರಯೋಜನಗಳನ್ನು ಪಡೆಯುವ ಮೂಲಕ ತಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸಲು ವಿಶೇಷ ಗಮನಹರಿಸಬೇಕು. ಹಾಗದರೆ ಮಾತ್ರ ಸಮಾಜದಲ್ಲಿ ಶೋಷಿತ ಸಮುದಾಯ ಮುಖ್ಯವಾಹಿನಿ ಬರಬಹುದು ಎಂದರು.
ಹಿರಿಯ ವಕೀಲರಾದ ಕಾಶಿಯಪ್ಪ, ಸಾಹಿತಿ ಜಗದೀಶ್ ಜೋಡುಬೀಟಿ ಮಾತನಾಡಿದರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕ ವನಿತ್ ಕುಮಾರ್ ಮುಖ್ಯ ಭಾಷಣ ಮಾಡಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಆರ್.ಪರಶುರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಅಮ್ಮುಣಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಬಿ.ಮುರುಗ, ಖಜಾಂಚಿಗಳಾದ ಎಚ್.ಎನ್.ಕುಮಾರ್ ಮಹಾದೇವ್, ಪಾಲಿಬೆಟ್ಟದ ನಾಸೀರ್, ನಿಟ್ಟೂರು ಗ್ರಾಮ ಸಂಚಾಲಕರಾದ ವಿಜಯ, ಬೆಂಡೆಕುತ್ತಿ ಪೈಸಾರಿಯ ಕಾಳ, ಹುಡ್ಕ ಇತರರು ಇದ್ದರು.