ಅಂಬೇಡ್ಕರ್​ ಧ್ಯೇಯೋದ್ದೇಶಗಳಿಗೆ ಜೀವನ ಮುಡಿಪು

kgf
Published on

ಕೆಜಿಎಫ್​- ಅಂಬೇಡ್ಕರ್​ ಅವರ ಗೌರವವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಬೇಕೆಂಬ ಉದ್ದೇಶದಿಂದ ನನ್ನ ಕಾಯಾ, ವಾಚಾ, ಮನಸಾ ಅಧಿಕಾರವನ್ನು ಅವರ ಧ್ಯೇಯೋದ್ಧೇಶಗಳಿಗೆ, ಅವರು ನಡೆದಂತಹ ದಾರಿಗೆ ಸಮರ್ಪಣೆ ಮಾಡಿದ್ದೇನೆ ಎಂದು ಶಾಸಕಿ ರೂಪಕಲಾ ಹೇಳಿದರು.

ನಗರದ ಅಂಬೇಡ್ಕರ್​ ಉದ್ಯಾನವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ 134ನೇ ಜಯಂತಿಯಲ್ಲಿ ಮಾತನಾಡಿದ ಅವರು, ಇಡೀ ದೇಶದ ಜನತೆಗೆ ಸಮಾನತೆ, ಭ್ರಾತೃತ್ವ ಮತ್ತು ಮೂಲ ಹಕ್ಕುಗಳನ್ನು ವರದಾನವನ್ನಾಗಿ ನೀಡಿದ ಮಹಾನ್​ ಚೇತನ. ಅವರ ಪಾದ ಸ್ಪರ್ಶವಾದ ಈ ನೆಲವನ್ನು ಪವಿತ್ರವನ್ನಾಗಿ ನೋಡಿಕೊಳ್ಳುವುದು ನನ್ನ ಧರ್ಮವಾಗಿದ್ದು, ಅವರಿಗೆ ಕೀರ್ತಿ ತರುವ ಕೆಲಸ ಮಾಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಈಗಾಗಲೇ ಗುರುತಿಸಿರುವಂತಹ 8 ಎಕರೆ ಜಾಗದಲ್ಲಿ ಇಡೀ ಜಿಲ್ಲೆಯಲ್ಲಿಯೇ ಅಥವಾ ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿ ಅಂಬೇಡ್ಕರ್​ ಸ್ಮಾರಕ, ಆಡಿಟೋರಿಯಂ ನಿಮಾರ್ಣ ಮಾಡುವ ಕೆಲಸ ಮಾಡಲಾಗುವುದು. ಕೆಜಿಎಫ್​ಗೆ ಅಂಬೇಡ್ಕರ್​ ಬಂದಾಗ ಏನೇನು ದೂರದೃಷ್ಟಿಯನ್ನಿಟ್ಟುಕೊಂಡಿದ್ದರೋ, ಅವರ ಆಲೋಚನೆಗಳೇನಿತ್ತೋ, ಇಚ್ಛಾಶಕ್ತಿ ಏನಿತ್ತೋ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದ್ದು, ಅದನ್ನು ಸಾಕಾರಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.

ಪಕ್ಷದ ಅತ್ಯಂತ ಕಿರಿಯ ಕಾರ್ಯಕರ್ತರಿಂದ ಹಿಡಿದು ನಾಯಕರೂ ಸಹ ಅಂಬೇಡ್ಕರ್​ ನಡೆ, ನುಡಿಗಳನ್ನು ಮೈಗೂಡಿಸಿಕೊಂಡು ವಿಚಾರವಂತರಾಗಬೇಕೇ ಹೊರತೂ ಪ್ರಚಾರವಂತರಾಗಬಾರದು. ಧಮೋರ್ ರಕ್ಷತಿ ರಕ್ಷಿತ@ ಎಂಬಂತೆ ಧರ್ಮ ರಕ್ಷಣೆ ಮಾಡಿದಲ್ಲಿ ಧರ್ಮವೇ ನಮ್ಮನ್ನು ರಕ್ಷಿಸುವುದರಿಂದ ಎಲ್ಲರೂ ಧರ್ಮದ ದಾರಿಯಲ್ಲಿ ನಡೆಯೋಣ ಎಂದರು.

ಇಡೀ ರಾಜ್ಯಕ್ಕೆ 7 ಸಾವಿರ ಕೋಟಿ ರೂ. ಸಿಎಂ ವಿಶೇಷ ಅನುದಾನವಿದ್ದು, ಅದರ ಪೈಕಿ ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಂಬೇಡ್ಕರ್​ ಸ್ಮಾರಕ, ಆಡಿಟೋರಿಯಂ, ದೇಶಕ್ಕೆ ಸೇವೆ ಮಾಡಿರುವ ಮಹನೀಯರ ಜೀವನ ಚಿತ್ರಣ ಬಿಂಬಿಸುವ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ ಆ ಪಕ್ಷ, ಈ ಪಕ್ಷ ಎಂಬ ಬೇಧಭಾವವಿಲ್ಲದೇ ಇಡೀ ತಾಲೂಕಿನ ಎಲ್ಲರಿಗೂ ಅನ್ವಯಿಸುವಂತಹ ಉದ್ಯಾನವನ ನಿರ್ಮಿಸಲಾಗುವುದು ಎಂದರು.

ಅಂಬೇಡ್ಕರ್​ ಕೇವಲ ಸಂವಿಧಾನ ರಚನೆ ಮಾಡಲಿಲ್ಲ, ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಖಾನೆಗಳಲ್ಲಿ ದಿನದ 18 ಗಂಟೆ ಕಾಲ ದುಡಿಯುತ್ತಿದ್ದ ಕಾರ್ಮಿಕರು ದಿನದ 8 ಗಂಟೆಗಳ ಕಾಲ ಮಾತ್ರ ದುಡಿಯಬೇಕು ಎಂಬ ನಿಯಮ ಜಾರಿಗೆ ತಂದ ಮಹಾನ್​ ಪುರುಷ. ಹಿಂದೆ ಮಹಿಳೆಯರಿಗೆ ಸಮಾನತೆ ದೊರಕದೇ ಅಸಮಾನತೆ ಆಚರಿಸುತ್ತಿದ್ದುದನ್ನು ಮನಗಂಡು ಸಂವಿಧಾನದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ನೀಡಿದವರು ಅಂಬೇಡ್ಕರ್​ ಆಗಿದ್ದಾರೆ ಎಂದರು.

ಪೌರಾಯುಕ್ತ ಪವನ್​ಕುಮಾರ್​, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್​, ಸಿಡಿಪಿಒ ರಾಜೇಶ್​, ವೃತ್ತ ನಿರೀಕ್ಷಕ ನವೀನ್​, ಬಿಇಒ ಅನಿತ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net