

ರಾಮನಗರ: ಯಾವ ದಲಿತ ಜನಾಂಗದಿಂದ ನಾವು ಹಿಂದುಗಳಾಗಿ ಉಳಿದಿದ್ದೇವೋ ಅಂತಹ ಜನಾಂಗವನ್ನು ನಾವು ಅಸ್ಪಶ್ಯತೆ ಹೆಸರಲ್ಲಿ ದೂರ ಇಟ್ಟಿದ್ದೇವೆ. ಇಂತಹ ದೋಷಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ
ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಥ ಸಂಚಲನದ ನಂತರ ನಡೆದ ಬೌದ್ಧಿಕ್‌ನಲ್ಲಿ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ಜಾತಿ ಜಾತಿ ಮಧ್ಯೆ ದ್ವೇಷ ನಿರ್ಮಾಣವಾಗಿದೆ. ಮೇಲುಜಾತಿ, ಕೀಳು ಜಾತಿ ಎನ್ನುವ ವಿಭಜನೆ ನಡೆಯುತ್ತಿದೆ. ದಲಿತರನ್ನು ಅಸ್ಪಶ್ಯತೆ ಹೆಸರಲ್ಲಿ ದೂರ ಇಡಲಾಗುತ್ತಿದೆ. ಅಂಬೇಂಡ್ಕರ್ ಅವರನ್ನು ದಲಿತ ಬಂಧು ಎಂದು ಕರೆಯಲಾಗುತ್ತಿದೆ. ಆದರೆ, ಅವರು ದೇಶ ಬಂಧು, 1947ರಲ್ಲಿ ಧರ್ಮದ ಆಧಾರದಲ್ಲಿ ಪಾಕಿಸ್ತಾನ ಉದಯವಾಗಿ ಭಾರತ ವಿಭಜನೆಯಾಗುತ್ತಿದೆ ಎನ್ನುವುದನ್ನು ಅರಿತು ಪಾಕಿಸ್ತಾನದಲ್ಲಿರುವ ಹಿಂದುಗಳು ಭಾರತಕ್ಕೆ ಬರಲಿ, ಇಲ್ಲಿರುವ ಮುಸ್ಲಿಮರು ಅಲ್ಲಿಗೆ ಹೋಗಲಿ ಎನ್ನುವ ಶ್ರೇಷ್ಠ ಚಿಂತನೆ ಹೊಂದಿದ್ದರು. ಅಂತಹ ಮಹಾನ್ ನಾಯಕರೊಟ್ಟಿಗೆ ಇದ್ದ ದಲಿತ ಸಮುದಾಯದೊಂದಿಗೆ ಒಟ್ಟಿಗೆ ಕೂತು ಕನಿಷ್ಠ ಟೀ ಕುಡಿಯುವುದಿಲ್ಲ ಎನ್ನುವುದು ಎಂತಹ ದುರ್ದೈವದ ಸಂಗತಿ ಎಂದು ಬೇಸರಿಸಿದರು.
ರಾಣಾ ಪ್ರತಾಪ ಸಿಂಹ ಮುಸ್ಲಿಂ ವಿರುದ್ಧ ಹೋರಾಡಿದಾಗ ಕೈ ಜೋಡಿಸಿದ್ದು ದಲಿತ ಸಮುದಾಯದ ಸೈನಿಕರು. ದಲಿತರ ಬಗೆಗಿನ ಅಸ್ಪಶ್ಯತೆ ದೂರ ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ, ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆಯ ದಿವ್ಯ ಚಿಂತನೆಯನ್ನು ಹೊಂದಿ ಆರ್‌ಎಸ್ ಎಸ್ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಯಾವ ದೇಶಗಳಿಗೆ ಮಾಂಸವನ್ನು ಬೇಯಿಸಿ ತಿನ್ನಬೇಕು ಎನ್ನುವುದೋ ಗೊತ್ತಿರಲಿಲ್ಲವೋ, ಆ ವೇಳೆಗಾಗಲೇ ಭಾರತದಲ್ಲಿ ಗಟ್ಟಿಯಾದ ಕುಟುಂಬ ಪದ್ಧತಿ ನಡೆದುಕೊಂಡು ಬಂದಿದೆ. ನಮ್ಮ ದೇಶ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ನಮ್ಮಲ್ಲಿದ್ದ ಕಚ್ಚಾಟದಿಂದಾಗಿ ಒಂದು ಸಾವಿರ ವರ್ಷಗಳ ಹಿಂದೆ ಮುಸ್ಲಿಮರು, 250 ವರ್ಷಗಳ ಹಿಂದೆ ಕ್ರಿಶ್ಚಿಯನ್ನರು ನಮ್ಮನ್ನು ಆಳುವಂತೆ ಆಯಿತು. ಮುಸ್ಲಿಮರ ಆಳ್ವಿಕೆ ಅವಧಿಯಲ್ಲಿ ನಾವು ದೈಹಿಕ ದಾಸ್ಯವನ್ನು ಕಂಡರೆ, ಕ್ರಿಶ್ಚಿಯನ್ನರ ಅವಧಿಯಲ್ಲಿ ಬೌದ್ಧಿಕ ದಾಸ್ಯವನ್ನು ಕಂಡಿದ್ದೇವೆ ಎಂದರು.
ಭಾರತದ ನೆಲವನ್ನು ಮಾತೃಭೂಮಿ ಎಂದು ತಿಳಿದು ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಣಾ ಪ್ರತಾಪ, ಶಿವಾಜಿ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ಚನ್ನಮ್ಮ, ಕೃಷ್ಣದೇವರಾಯರಂತಹ ಮಹಾನ್ ದೇಶ ಪ್ರೇಮಿಗಳು ಹೋರಾಟ ಮಾಡಿದ್ದಾರೆ. ಆದರೆ, ನಮ್ಮ ನಾಯಕರಲ್ಲಿ ಮಾತೃಭೂಮಿ ಭಾವ ಹೋಗಿ, ಮಾತ್ರ ಭೂಮಿ ಆಗಿದೆ. 1946 ರಲ್ಲಿ ಹುಟ್ಟಿಕೊಂಡ ಮುಸ್ಲಿಂ ಲೀಗ್ ಪ್ರತ್ಯೇಕ ರಾಷ್ಟ್ರವನ್ನು ಕೇಳಿತು. ಈ ವೇಳೆ ಹಿಂದುಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ ಎನ್ನುವ ಭಾವನೆ ಇತ್ತು. ಆದರೆ, ಈ ಕಾಂಗ್ರೆಸ್ ನಿಲ್ಲಲಿಲ್ಲ. ಈ ವೇಳೆ ಜನರ ಮಾತುಗಳಿಗೆ ಸ್ವಾತಂತ್ರೃದ ಮುಂಚೂಣಿಯಲ್ಲಿದ್ದ ಎಂ.ಕೆ.ಗಾಂಧಿ ಅವರು ದೇಶ ವಿಭಜನೆ ಆಗುವ ಮುನ್ನ ನನ್ನ ದೇಹ ತುಂಡಾಗಲಿ ಎಂದರು, ನೆಹರೂ ಇದೊಂದು ಫೆಟಾಂಸ್ಟಿಕ್ ನಾನ್‌ಸೆನ್ಸ್ ಎಂದರು, ರಾಜೇಂದ್ರ ಪ್ರಸಾದ್ ಅವರು ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ಸೈನಿಕವಾಗಿ ಯಾವುದೇ ವಿಧದಲ್ಲೂ ವಿಭಜನೆ ಆಗುವುದಿಲ್ಲ ಎಂದರು. ಆದರೆ ವಿಪರ್ಯಾಸವೆಂದರೆ, ಎಂ.ಕೆ.ಗಾಂಧಿ ಅವರು ಮಹಾತ್ಮಗಾಂಧಿ ಆದರು, ನೆಹರು ತುಂಡಾದ ದೇಶದ ಮೊದಲ ಪ್ರಧಾನಿ ಆದರು, ರಾಜೇಂದ್ರ ಪ್ರಸಾದ್ ಮೊದಲ ರಾಷ್ಟ್ರಪತಿ ಅದರು ಎಂದು ಟೀಕಿಸಿದರು.
ಪೌರತ್ವ ಕಸಿಯಲು ಅಲ್ಲ: ದೇಶ ವಿಭಜನೆಯಾದರೂ ತಲೆ ನೋವು ಮಾತ್ರ ಕಡಿಮೆ ಆಗಲೇ ಇಲ್ಲ. ಇಂದು ಪಾಕಿಸ್ತಾನ ಭಯೋತ್ಪಾದಕರು ಉತ್ಪಾದನೆ ಮಾಡುವ ಕಾರ್ಖಾನೆಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸ್ವಾತಂತ್ರೃದ ವೇಳೆ ಇದ್ದ ಅಲ್ಪಸಂಖ್ಯಾತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಭಾರತದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಸಂಖ್ಯೆ ಶೇ.24ಕ್ಕೆ ಏರಿಕೆಯಾಗಿದೆ. ನಮ್ಮ ದೇಶದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ, ಆದರೆ ಅವರು ಎಂದೂ ಪಾಕಿಸ್ತಾನಕ್ಕೆ ಹೋಗಲು ಇಷ್ಟುಪಡುವುದಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಅವರು ನೆಮ್ಮದಿಯಾಗಿದ್ದಾರೆ. ಆದರೆ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳು ಇಂದು ತೊಂದರೆಗೆ ಒಳಗಾಗಿದ್ದಾರೆ. ಅಂತಹವರು ಭಾರತಕ್ಕೆ ಬರುತ್ತಿದ್ದಾರೆ. ನಮ್ಮದೇ ಭಾಗವಾಗಿರುವ ಹಿಂದುಗಳಿಗೆ ನ್ಯಾಯಕೊಡಿಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು 72 ವರ್ಷಗಳ ನಂತರ ತರಲಾಗಿದೆಯೇ ಹೊರತು ಯಾರ ಪೌರತ್ವ ತೆಗೆಯಲು ಅಲ್ಲ ಎಂದು ಪ್ರಭಾಕರ್ ಭಟ್ ಹೇಳಿದರು.
ನಮ್ಮ ಮೂರ್ತಿಗಳ ಮೇಲೆ ಏಸು ಪ್ರತಿಮೆ: ಹಿಂದಿನಿಂದಲೂ ಮುನೇಶ್ವರ ಸ್ವಾಮಿ ಬೆಟ್ಟದಲ್ಲಿ 6 ಅಡಿ ಎತ್ತರ ಮೂರು ಮೂರ್ತಿಗಳಿಗೆ ಸ್ಥಳೀಯರು ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮೂರು ಮೂರ್ತಿಗಳ ಮೇಲೆ ಸಿಮೆಂಟ್ ಸ್ಲಾೃಬ್‌ಗಳ ಮೂಲಕ ಮುಚ್ಚಿ ಏಸು ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಜಗತ್ತಿನ ಅತಿ ಎತ್ತರದ ಏಸುವಿನ ಪ್ರತಿಮೆ ನಿರ್ಮಾಣ ಮಾಡಿ, ಕ್ರಿಶ್ಚಿಯನ್ ಕೇಂದ್ರ ಮಾಡಲು ಹೊರಟಿದ್ದಾರೆ. ಅಲ್ಲದೆ, ಪಕ್ಕದಲ್ಲಿಯೇ ಇರುವ ಕೆರೆಯನ್ನು ಪಾದ್ರಿ ಕೆರೆ ಎಂದು ನಾಮಕರಣ ಮಾಡಿದ್ದಾರೆ, ಆದರೆ ಯಾವ ಪಾದ್ರಿ ಮುಳುಗಿದ್ದ ಹೇಳಲಿ ಎಂದು ಸವಾಲು ಹಾಕಿದರು. ಯಾವುದೇ ಕಾರಣಕ್ಕೂ ಮತ್ತೊಂದು ಕ್ರಿಶ್ಚಿಯನ್ ದೇಶ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದರು.
ನೀರಿನ ಮೇಲಿನ ಗುಳ್ಳೆಯಂತೆ: ಒಣಗಿದ್ದ ಸೊರಗಿದ್ದ ನಾಡಿನಲ್ಲಿ ಮತ್ತೊಮ್ಮೆ ರಾಮ ಎದ್ದು ನಿಂತಿದ್ದಾನೆ. ದುರ್ದೈವ, ರಾಮನಗರದಲ್ಲಿ ರಾಮನ ಪರಂಪರೆ ಇಲ್ಲ, ರಾಮ ರಾಜ್ಯ ನಿರ್ಮಾಣವಾಗಬೇಕಿತ್ತು, ಆಗಿಲ್ಲ, ರಾವಣ ರಾಜ್ಯ ಕಟ್ಟಲು ಹೊರಟಿದ್ದಾರೆ. ಅಧಿಕಾರ ದರ್ಪದಿಂದ ಇದನ್ನು ಸಾಧಿಸಲು ಸಾಧ್ಯವಿಲ್ಲ. ನೀರಿನ ಮೇಲಿನ ಗುಳ್ಳೆಯಂತೆ ಒಡೆದು ಹೋಗುತ್ತೀರಿ ಎಂದು ಪ್ರಭಾಕರ ಭಟ್ ಎಚ್ಚರಿಕೆ ನೀಡಿದರು.
ಗಮನ ಸೆಳೆದ ಪಥ ಸಂಚಲನ: ನಗರದ ಬಾಲಗೇರಿ ಶಾಲಾ ಆವರಣ ಮತ್ತು ಕೆಂಪೇಗೌಡ ವೃತ್ತದಿಂದ ಎರಡು ಮಾರ್ಗಗಳಲ್ಲಿ ಹೊರಟ ಪಥ ಸಂಚಲನ ರಾಮನಗರ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಬೃಹತ್ ಪಥ ಸಂಚಲನ. ಶಿಸ್ತುಬದ್ಧವಾಗಿ ಗಣ ವೇಷಧಾರಿಗಳು ಹೆಜ್ಜೆ ಹಾಕಿದ್ದು ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿತು. ದಾರಿಯುದ್ದಕ್ಕೂ ಹೂವಿನ ಮಳೆಗರೆಯುವ ಮೂಲಕ ಗಣವೇಷಧಾರಿಗಳನ್ನು ಸಾರ್ವಜನಿಕರು ಸ್ವಾಗತಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಇದರ ಜತೆಗೆ, ಪೊಲೀಸರೂ ಸಹ ಗೊಂದಲಗಳು ನಿರ್ಮಾಣವಾಗದಂತೆ ಸಹಕರಿಸಿದರು.