

ಬೆಳಗಾವಿ: ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಕೂಲಿಕಾರರಿಗೆ, ಕಾರ್ಮಿಕರಿಗೆ ಸಮಾನತೆ ಕೊಡಿಸುವಲ್ಲಿ ಹಾಗೂ ಪ್ರತಿ ಪ್ರಜೆಗೂ ಮತದಾನದ ಹಕ್ಕು ದೊರೆಯಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಪ್ರೊ.ಎ. ಬಿ. ರಾಮಚಂದ್ರಪ್ಪ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಂವಿಧಾನ ದಿನಾಚರ ಣೆಯ ಪ್ರಯುಕ್ತ ಡಾ.ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಪರಿಕಲ್ಪನೆ ವಿಷಯದ ಮೇಲೆ ಈಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳೆಯ ಸಾಂಪ್ರ ದಾಯಿಕ ವ್ಯವಸ್ಥೆಯನ್ನು ಪಲ್ಲಟ್ಟಿಸಿ ಹೊಸ ವ್ಯವಸ್ಥೆ ಹುಟ್ಟುಹಾಕಿ, ಜಾತಿ ಪದ್ಧತಿ ಹೋಗಲಾಡಿಸಿ ಜಾತ್ಯತೀತ ದೇಶ ಸ್ಥಾಪಿಸುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಮಾತನಾಡಿ, ಸಂವಿಧಾನದ ಅಧ್ಯಯನ ಬಹಳಷ್ಟು ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಶಿಸ್ತು, ಸಂಯಮ ಅಳವಡಿಸಿಕೊಂಡು ಅವರಂತೆ ಜ್ಞಾನದಾಹಿಗಳಾಗಿ ಜ್ಞಾನಾರ್ಜನೆ ಪಡೆಯಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡೆದುಕೊಂಡು ಉಜ್ವಲ ಭವಿಷ್ಯವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕೆಂದರು.
ಸಿಂಡಿಕೇಟ್ ಸದಸ್ಯ ರವೀಂದ್ರ ನಾಯ್ಕರ್ ಮಾತನಾಡಿದರು. ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಡಾ.ಕವಿತಾ ಕುಸುಗಲ್ಲ, ಗ್ಯಾನಪ್ಪ ಮಾದಾರ, ಡಾ.ಸುಷ್ಮಾ ಆರ್. ಇತರರಿದ್ದರು.