

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ವಿವಿಧ ಸಂಘಟನೆಗಳ ವತಿಯಿಂದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವವನ್ನು ಶುಕ್ರವಾರ ಇಲ್ಲಿನ ಸಿಬಿಟಿ ಸಭಾಂಗಣದಲ್ಲಿ ಆಚರಿಸಲಾಯಿತು.
ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಬರೆದಿರುವ ಪ್ರತಿಯೊಂದು ಪುಸ್ತಕಗಳು ಅಮೂಲ್ಯ ಗ್ರಂಥಗಳಾಗಿವೆ. ದೇಶದ ಪ್ರಗತಿ, ಸಮಾಜದ ಸುಧಾರಣೆಗಾಗಿ ಅವರ ಬರಹಗಳು ಇಂದಿಗೂ ಪ್ರಸ್ತುತವಾಗಿವೆ. ದೇಶಕ್ಕಾಗಿ, ದೇಶದ ಜನರಿಗಾಗಿ ಏನಾದರೂ ಕೊಡುಗೆ ನೀಡಬೇಕು ಎನ್ನುವ ಕಾರಣಕ್ಕಾಗಿ ತಮ್ಮನ್ನು ಅಪಿರ್ಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದರು. ಅವರ ಸಾಧನೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದರು.
ಉಪನ್ಯಾಸ ನೀಡಿದ ಕರ್ನಾಟಕ ವಿಶ್ವವಿದ್ಯಾಲಯ ಹಿರಿಯ ಪ್ರಾಧ್ಯಾಪಕ ಡಾ. ಎಸ್.ವೈ. ಮುಗಳಿ, ಚಾತುರ್ವರ್ಣ ವ್ಯವಸ್ಥೆಯನ್ನು ಅಂಬೇಡ್ಕರ್ ಅವರು ಬಲವಾಗಿ ವಿರೋಧಿಸಿದ್ದರು. ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ಹೋರಾಡಿದವರು. ಅಂಬೇಡ್ಕರ್ ಅವರು ದಲಿತರಿಗಾಗಿ ಮಾತ್ರ ಹೋರಾಟ ಮಾಡಲಿಲ್ಲ ಬದಲಾಗಿ ಸಮಾಜದ ಎಲ್ಲ ಕೆಳಸ್ತರದ ಜನರ ಹಕ್ಕುಗಳಿಗಾಗಿ ಹೋರಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಡಾ. ಅಂಬೇಡ್ಕರ್ ಅವರು ತಾವು ಎದುರಿಸಿದ ಸಮಸ್ಯೆಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯ ಶಕ್ತಿಯಾಗಿ ಹೇಗೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂದು ನಾವೆಲ್ಲರೂ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ನೀಡಿ ದೇವಮಾನವರಾದರು ಎಂದರು.
ಹಿರಿಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಪಿ.ವೈ. ನಾಯಕ, ಸಂಘಟನೆಗಳ ಪ್ರಮುಖರಾದ ಗಂಗಾಧರ ಕಮಲದಿನ್ನಿ, ರಂಗಣ್ಣ ತಳವಾರ, ಡಿ. ಪ್ರಸಾದ, ಆರ್.ಎಫ್. ಕವಳಿಕಾಯಿ, ಅಧಿಕಾರಿಗಳಾದ ಎಂ.ಬಿ. ಕಪಲಿ, ಆರ್.ಎಂ. ರಾಜೇಂದ್ರ, ಎಸ್.ಎ. ಬೀಳಗಿ ಇತರರಿದ್ದರು.