ಪೂರ್ಣಗೊಂಡರೂ ಉದ್ಘಾಟನೆಯಿಲ್ಲ

ambedkar
Published on

- ಹರೀಶ್ ಮೋಟುಕಾನ, ಮಂಗಳೂರು

ಮಂಗಳೂರಿನ ಉರ್ವಸ್ಟೋರ್ ಅಂಗಡಿಗುಡ್ಡೆಯಲ್ಲಿ ದ.ಕ.ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ 17.82 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ದೊರಕಿಲ್ಲ.

2012-13ರಲ್ಲಿ ಮಂಜೂರಾದ ದ.ಕ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನಕ್ಕೆ ನಾಲ್ಕು ವರ್ಷಗಳ ಬಳಿಕ 2017ರ ಜನವರಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 12 ಕೋಟಿ ರೂ.ವೆಚ್ಚದ ಭವನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಿಲಾನ್ಯಾಸ ನೆರವೇರಿಸಿದ್ದ ಹಿಂದಿನ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದ್ದರು. ಆದರೆ ಕಾಮಗಾರಿ ಪೂರ್ಣಗೊಳ್ಳಲು ಮೂರು ವರ್ಷ ಪಡೆದುಕೊಂಡಿದೆ. 2019 ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಂಡಿತ್ತು. ದಲಿತ ಸಂಘನೆಗಳ ಹೋರಾಟದ ಫಲವಾಗಿ ಹಿಂದಿನ ಜಿಲ್ಲಾಧಿಕಾರಿ ಸುಭೋದ್‌ಯಾದವ್ ದೇರೆಬೈಲ್ ವಾರ್ಡ್‌ನಲ್ಲಿ 1.61 ಎಕರೆ ಜಾಗವನ್ನು ಕಾದಿರಿಸಿದ್ದರು.

3.82 ಕೋಟಿ ರೂ.ಪ್ರಸ್ತಾವನೆ: ಭವನದ ನಿರ್ಮಾಣಕ್ಕೆ ಈಗ 17.82 ಕೋಟಿ ರೂ.ವೆಚ್ಚವಾಗಿದೆ. ಸರ್ಕಾರ 12 ಕೋಟಿ ರೂ. ಹಾಗೂ ಮಂಗಳೂರು ಮಹಾನಗರ ಪಾಲಿಕೆ 2.50 ಕೋಟಿ ರೂ.ಅನುದಾನ ಒದಗಿಸಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ದ.ಕ.ಜಿಲ್ಲಾ ಪಂಚಾಯಿತಿಯಿಂದ ಅನುದಾನ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಕೋರಿಕೆ ಸಲ್ಲಿಸಿತ್ತು. ಆದರೆ ಈ ಸಂಸ್ಥೆಗಳು ವಿವಿಧ ಕಾರಣ ನೀಡಿ ಅನುದಾನ ಒದಗಿಸಲು ನಿರಾಕರಿಸಿವೆ. ಹಣ ಪಾವತಿಗೆ ಬಾಕಿ ಇರುವುದರಿಂದ ಕಾಮಗಾರಿ ನಿರ್ವಹಿಸಿದ ಸಂಸ್ಥೆ ಭವನ ವನ್ನು ಸಮಾಜ ಕಲ್ಯಾಣ ಇಲಾಖೆಗೆ ಬಿಟ್ಟುಕೊಟ್ಟಿಲ್ಲ.

ಆಕರ್ಷಕ ವಿನ್ಯಾಸ: ಅಂಬೇಡ್ಕರ್ ಭವನ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. 700 ಆಸನದ ಸುಸಜ್ಜಿತ ಸಭಾಭವನ ನಿರ್ಮಾಣವಾಗಿದೆ. ಸಭಾಭವನದ ಬೃಹತ್ ವೇದಿಕೆ ಸಭೆ, ಮದುವೆ ಹಾಗೂ ಇತರ ಸಮಾರಂಭಗಳ ಜತೆಗೆ ರಂಗ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಸಭಾಭವನದ ಒಳಗೆ ಅಳವಡಿಸಿದ 5 ರೆಕ್ಕೆಯ ಬೃಹತ್ ಫ್ಯಾನ್ ಆಕರ್ಷಕವಾಗಿದೆ.

ಕಚೇರಿ ಸ್ಥಳಾಂತರ: ದ.ಕ.ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮತ್ತು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಮಂಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರವಾಗಲಿದೆ. ಸುಸಜ್ಜಿತ ಗ್ರಂಥಾಲಯ ಮತ್ತು ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್ ಕೂಡ ಭವನದಲ್ಲಿ ಆರಂಭಗೊಳ್ಳಲಿದೆ.

ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಹಣ ಬಿಡುಗಡೆಗೆ ಬಾಕಿ ಇರುವ ಕಾರಣ ಉದ್ಘಾಟನೆ ವಿಳಂಬವಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಶೀಘ್ರ ಬಿಡುಗಡೆ ನಿರೀಕ್ಷೆ ಇದೆ.

- ವೇದವ್ಯಾಸ ಕಾಮತ್, ಶಾಸಕರು

ಜಿಲ್ಲಾ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಂಡಿದೆ. ಸ್ಥಳೀಯ ಅನುದಾನ ಬಿಡುಗಡೆಗೆ ಬಾಕಿ ಇದೆ. ಈ ಹಣವನ್ನು ಟೆಂಡರ್ ಏಜೆನ್ಸಿಗೆ ನೀಡಬೇಕು. ಬಳಿಕವಷ್ಟೇ ಭವನ ನಮಗೆ ಹಸ್ತಾಂತರವಾಗಲಿದೆ.

- ಯೋಗೀಶ್ ಕುಮಾರ್, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net