ಕುಶಾಲನಗರದಲ್ಲಿ ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ

ambedkar bhavana
Published on

ಕುಶಾಲನಗರ:

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುವ ಕಾರ್ಯ ಆಗಬೇಕಿದ್ದು, ಅವರ ಧ್ಯೇಯ, ಉದ್ದೇಶ ಈಡೇರಿಕೆಗೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಾಲೂಕು ಮಟ್ಟದ ಡಾ. ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

50 ಸೆಂಟ್ ಜಾಗದಲ್ಲಿ ನಿರ್ಮಾಣವಾಗುವ ನೂತನ ಭವನ ಆಕರ್ಷಣೀಯವಾಗಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗುವುದು. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಪ್ರತಿ ತಾಲೂಕು ಕೇಂದ್ರಕ್ಕೆ 2 ಕೋಟಿ ರೂ. ಹಾಗೂ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರಿಂದ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಜತೆಗೆ ಇದು ಗೌರವದ ವಿಷಯವಾಗಿದೆ.

ಎಷ್ಟೇ ದಲಿತ ಸಂಘಟನೆಗಳು ಇದ್ದರೂ ಅವರೆಲ್ಲರ ಗುರಿ ಒಂದೇ ಆಗಿದೆ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಭವನ ನಿರ್ಮಾಣದ ಜತೆಗೆ ವಾಹನ ನಿಲುಗಡೆಗೆ ಅಗತ್ಯ ಸ್ಥಳಾವಕಾಶ ಒದಗಿಸಬೇಕು. ಗ್ರಂಥಾಲಯ ಸ್ಥಾಪಿಸಬೇಕು. ಲೋಪದೋಷ ಕಂಡುಬಾರದAತೆ, ಕಳಪೆ ಆಗದಂತೆ ಕಾಮಗಾರಿ ನಡೆಸಬೇಕು ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಸೆಂಟ್ ಜಾಗ ಪೂರ್ಣ ಬಳಕೆ ಮಾಡಬೇಕು.

ಒಟ್ಟು 1.20 ಎಕರೆ ಜಾಗವಿದ್ದು, ಉಳಿದ ಜಾಗವನ್ನು ವಾಹನ ನಿಲುಗಡೆ ಬಳಕೆ ಮಾಡಬೇಕು. ಈ ಭವನ ಸಭೆ ಸಮಾರಂಭಗಳಿಗೆ,ಸಾAಸ್ಕೃತಿಕ, ಮನರಂಜನೆ ಸೇರಿದಂತೆ ಸೃಜನಶೀಲ ಚಟುವಟಿಕೆಗೆ ಉಪಯೋಗಿಸಿಕೊಳ್ಳಬೇಕು. ಇದೇ ರೀತಿ ಹಿಂದುಳಿದ ವರ್ಗಗಳ ಭವನ ನಿರ್ಮಾಣಕ್ಕೂ ಶಾಸಕರು ಕ್ರಮ ವಹಿಸಬೇಕು. ಗುಂಡೂರಾವ್ ಬಡಾವಣೆಯಲ್ಲಿ ಬಯಲು ರಂಗ ಮಂದಿರ, ಗ್ಯಾಲರಿ ಹಾಗೂ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಒದಗಿಸಿಕೊಡಬೇಕು. ತಾಲೂಕು ಕೇಂದ್ರಕ್ಕೆ ಬೇಕಿರುವ ಅಗತ್ಯ ಕಾಮಗಾರಿಗಳನ್ನು ಮಂಜೂರು ಮಾಡಿಸುವಲ್ಲಿ ಶಾಸಕರ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರ, ಸದಸ್ಯ ಜೈವರ್ಧನ್, ಮಾಜಿ ಸದಸ್ಯ ಹೆಚ್.ಡಿ. ಚಂದ್ರು ಮಾತನಾಡಿದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷಿö್ಮÃ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಅಮೃತ್ ರಾಜ್, ಶಿವಶಂಕರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ತಹಸೀಲ್ದಾರ್ ಕಿರಣ್ ಗೌರಯ್ಯ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಪರಮೇಶ್ವರ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಸಹಾಯಕ ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ದಲಿತ ಮುಖಂಡರಾದ

ಕೆ.ಬಿ.ರಾಜು, ದಾಮೋದರ್, ಗಣೇಶ್, ಸತೀಶ್, ಎಚ್.ಟಿ. ವಸಂತ, ಗೋವಿಂದರಾಜು ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ದಲಿತ ಸಮುದಾಯದ ಮುಖಂಡರು ಶಾಸಕ ಡಾ. ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net