

ಸುಳ್ಯ: ನನೆಗುದಿಗೆ ಬಿದ್ದಿರುವ ಸುಳ್ಯದ ಅಂಬೇಡ್ಕರ್ ಭವನವನ್ನು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಈಗಾಗಲೇ ಒಟ್ಟು 5 ಕೋಟಿ ರೂ. ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅದರಂತೆ 2 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ತ್ವರಿತವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನೀಲಿನಕ್ಷೆ ಮತ್ತು ಅಂದಾಜು ಪಟ್ಟಿ ತಯಾರಿಸಿ ಕೂಡಲೇ ನೀಡಬೇಕು. ಮುಂದಿನ ತಿಂಗಳಲ್ಲೇ ಟೆಂಡರ್ ಹಂತಕ್ಕೆ ಬಂದು ಡಿಸೆಂಬರ್ನಲ್ಲಿ ಕಾಮಗಾರಿ ಪ್ರಾರಂಭವಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮಾಜಿ ಜಿ.ಪಂ. ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಮಾಜಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ ಕೆ., ಸಹಾಯಕ ಅಭಿಯಂತ ಪರಮೇಶ್ವರ ಪಿ, ಜಿಪಂ ವಿಭಾಗದ ಎಇಇ ಫಯಾಝ್ ಅಹಮ್ಮದ್, ಇಂಜಿನಿಯರ್ ಮಣಿಕಂಠ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ಗುತ್ತಿಗೆದಾರ ಯೋಗೀಶ್ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ನಂದಿನಿ, ಸ್ಮಿತಾ, ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ, ಬಾಲಕೃಷ್ಣ ಕೀಲಾಡಿ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.