

ಕೋಲಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಗಳನ್ನು ಅಧ್ಯಯನ ಹಾಗೂ ಅಭಿವೃದ್ಧಿ ಕೌಶಲ ಕೇಂದ್ರಗಳನ್ನಾಗಿಸಿ, ಯುವಕರ ಶೈಕ್ಷಣಿಕ ಅಭಿವೃದ್ಧಿಗೆ ಜ್ಞಾನ ಕೇಂದ್ರಗಳನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್ಸಿ ಮತ್ತು ಎಸ್ಟಿ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಗ್ರಂಥಾಲಯ, ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಇದನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು. ಆಗ ಸಭೆಯಲ್ಲಿದ್ದ ಜಾಗೃತಿ ಸಮಿತಿ ಸದಸ್ಯರು ಒಪ್ಪಿಗೆ ನೀಡಿದರು.
ಎಲ್ಲ ತಹಸೀಲ್ದಾರ್ಗಳು ಸ್ಮಶಾನ ಜಾಗಗಳ ಪರಿಸ್ಥಿತಿ ಮಾಹಿತಿ ಪಡೆದುಕೊಳ್ಳಿ, ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಗಡಿ ಗುರುತಿಸಿ ಬೇಲಿ ನಿರ್ಮಿಸಬೇಕು. ಆ ನಂತರ ಗ್ರಾಪಂನಿಂದ ಸೌಲಭ್ಯ ಕಲ್ಪಿಸಬೇಕು ಎಂದರು.
ನಗರಸಭೆಯಲ್ಲಿ ಉಳಿಕೆಯಾಗಿದ್ದ ಎಸ್ಸಿಪಿ, ಟಿಎಸ್ಪಿ ಹಣದಲ್ಲಿ 10 ಲಕ್ಷ ರೂ. ಗ್ರಂಥಾಲಯಕ್ಕೆ ಕಲ್ಪಿಸಲಾಗಿದೆ. ಅದರಿಂದ ಡಿಜಿಟಲ್ ಲೈಬ್ರರಿ, ಶೌಚಗೃಹ ನಿರ್ಮಾಣ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಾದ್ಯಂತ ಇದುವರೆಗೂ 104 ಅಂಬೇಡ್ಕರ್ ಭವನಗಳ ನಿರ್ಮಾಣ ಪೂರ್ಣಗೊಂಡಿದ್ದು, ಅವುಗಳನ್ನು ಅಧ್ಯಯನ ಕೇಂದ್ರಗಳನ್ನಾಗಿ ಮಾರ್ಪಡು ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು. ಜಿಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ, ಕೆಜಿಎ್ ಎಸ್ಪಿ ಶಿವಾಂಶು ರಜಪೂತ್, ಎಡಿಸಿ ಮಂಗಳಾ, ಜಿಪಂ ಉಪ ಕಾರ್ಯದರ್ಶಿ ರಮೇಶ್, ಎಸಿ ಡಾ.ಮೈತ್ರಿ, ತಹಸೀಲ್ದಾರ್ಗಳಾದ ಡಾ.ಎಂ.ನಯನಾ, ರೂಪಾ, ಸುಧೀಂದ್ರ ಇದ್ದರು.
ಸಾವುಗಳು ಸಂಭವಿಸುತ್ತಿರೂ ಇಲ್ಲ ಕ್ರಮ
ಜಾಗೃತಿ ಸಮಿತಿ ಸದಸ್ಯ ವರದೇನಹಳ್ಳಿ ವೆಂಕಟೇಶ್ ಮಾತನಾಡಿ, ಟೇಕಲ್ ಭಾಗದ ಕಲ್ಲು ಗಣಿಯಲ್ಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ವಿಲರಾಗಿದ್ದಾರೆ ಎಂದು ದೂರಿದರು. ಸ್ಫೋಟಕಗಳನ್ನು ಬಳಕೆ ಮಾಡಿ ಬಂಡೆ ಸಿಡಿಸುತ್ತಿದ್ದಾರೆ, ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕು. ನರಸಾಪುರ ಹೋಬಳಿ ಸೊಣ್ಣೆನಹಳ್ಳಿ ಸಮೀಪ ಕಲ್ಲು ಸುಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ, ಇಲ್ಲಿ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಒಂದು ನ್ಯಾಯನ ಎಂದು ಪ್ರಶ್ನಿಸಿದರು. ಆಗ ಜಿಲ್ಲಾಧಿಕಾರಿ ಮಾತನಾಡಿ, ಸಂಪ್ರದಾಯಕವಾಗಿ ಕಲ್ಲು ಕುಟುಕರಿಗೆ ಅಧಿಕೃತ ದಾಖಲೆ ನೀಡಿರಲಿಲ್ಲ, ಸಂಪೂರ್ಣ ಮಾಹಿತಿ ಪಡೆದು ತಿಂಗಳ ಅಂತ್ಯದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಕ್ರೆಡಿಲ್ನಿಂದ ತಾರತಮ್ಯ
ಸದಸ್ಯ ವರದೇನಹಳ್ಳಿ ವೆಂಕಟೇಶ್ ಮಾತನಾಡಿ, ಕ್ರೆಡಿಲ್ನಲ್ಲಿ ಜೆಇ ಮಂಜುನಾಥ್ ಕೆಲಸದ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆ. ಎಸ್ಸಿ, ಎಸ್ಟಿ ಕಡತಗಳು ಹೋದರೆ ವಿಲೇ ಮಾಡುವುದಿಲ್ಲ. ವರದೇನಹಳ್ಳಿ ಶುದ್ಧ ನೀರಿನ ಟಕ ನಿರ್ಮಿಸಿ 5 ವರ್ಷ ಕಳೆದಿದ್ದರೂ ಬಿಲ್ ಪಾವತಿಸಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಎಂ.ಆರ್.ರವಿ, ಜಾತಿ ಕಾರಣಕ್ಕೆ ರ್ನಿಲಕ್ಷ್ಯ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಹಿಂದೆ ನಡೆದಿರುವ ರೀತಿ ಪ್ರಕರಣ ಮರು ಕಳುಸುವುದು ಬೇಡ. ಶಾಕಸರು ಶಿಫಾರಸು ನೀಡದರೂ ಕೆಲಸ ಮಾಡದಿರುವುದು ಗಮನಕ್ಕೆ ಇದೆ. ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಹಂತಹಂತವಾಗಿ ದಾಖಲೆ ಕಲ್ಪಿಸುವ ಭರವಸೆ
ಸದಸ್ಯ ಬೆಳಮಾರನಹಳ್ಳಿ ಆನಂದ್ ಮಾತನಾಡಿ, ಜಮೀನಿನಲ್ಲಿ ಹಲವು ದಶಕಗಳಿಂದ ಅನುಭೋಗದಲ್ಲಿದ್ದರೂ ಬಡವರಿಗೆ ಖಾತೆಯಾಗಿಲ್ಲ. ಪೋಡಿ ಅಭಿಯಾನ ನಡೆಯುತ್ತಿದ್ದು, ಹಲವು ಸಮಸ್ಯೆಗಳು ಕಂಡು ಬಂದಿವೆ. ಒಟ್ಟು 5,000 ಪೋಡಿ ಮಾಡಲಾಗಿದ್ದು, ಅಕ್ರಮ ಸಕ್ರಮದಡಿ ಪರಿಶೀಲಿಸದೆ ದಾಖಲೆ ಮಾಡಿರುವ ವಿಚಾರದಲ್ಲಿ ತಹಸೀಲ್ದಾರ್, ಅಧ್ಯಕ್ಷರು ತೊಂದರೆ ಅನುವಿಸಿದ್ದಾರೆ. ಮಾಲೂರಲ್ಲಿ ಇತರೆ ತಾಲೂಕುಗಳಲ್ಲೂ ಎಚ್ಚರಿಕೆಯಿಂದ ಕಡತ ತಯಾರಿಸಿ ಬಡವರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಿಸಿ ತಿಳಿಸಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯುವಕರು ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಕೇಳಿದಾಗ ತರಗತಿ ಮುಗಿದಿದೆ ಏನು ಮಾಡಬೇಕು ಅಂದಾಗ ಅಂತಹ ಸಂದರ್ಭದಲ್ಲಿ ಅವರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದರಿಂದ ದೈಹಿಕ ಶ್ರಮವಾಗುತ್ತದೆ. ಆಗ ಅನಗತ್ಯ ವಿಚಾರಗಳತ್ತ ಆಲೋಚನೆ ಹೋಗುವುದಿಲ್ಲ, ವಿಶ್ರಮಿಸಲು ಮುಂದಾಗುತ್ತಾರೆ. ಆಗ ಅಪರಾಧ ಚಟುವಟಿಕೆ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.