ಮೈಸೂರು ನಾಡನಹಳ್ಳಿಯಲ್ಲಿ ಅಂಬೇಡ್ಕರ್ ಭವನಕ್ಕೆ ಚಾಲನೆ

Ambedkar samudhaya bhavana
Published on

ಮೈಸೂರು: ನಾಡನಹಳ್ಳಿ ರಾಜಕೀಯವಾಗಿ ಪ್ರಬುದ್ಧ ಜನರನ್ನು ಒಳಗೊಂಡಿರುವ ಗ್ರಾಮವಾಗಿದ್ದು, ಗ್ರಾಮಕ್ಕೆ ಅವಶ್ಯಕತೆ ಇರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಾಡನಹಳ್ಳಿ ಗ್ರಾಮದಲ್ಲಿ ಶನಿವಾರ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಗ್ರಂಥಾಲಯ, ಆಟದ ಮೈದಾನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಹಂತಹಂತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

‘ನಾನು ಪ್ರತಿಮೆಯಲ್ಲಿಲ್ಲ, ಸಂವಿಧಾನ ಮತ್ತು ಪುಸ್ತಕಗಳಲ್ಲಿದ್ದೇನೆ’ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಆದರೂ ಅವರ ಗೌರವದ ಸಂಕೇತವಾಗಿ ಪ್ರತಿಮೆಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಜನರು ಬಾಬಾಸಾಹೇಬರ ಮಾತನ್ನು ಅರ್ಥ ಮಾಡಿಕೊಂಡು ಶಿಕ್ಷಣ ಪಡೆದು, ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಈ ಗ್ರಾಮವು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟು ಮೇಲ್ದರ್ಜೆಗೇರಿದೆ. ಆದರೂ ಇಲ್ಲಿನ ಗ್ರಾಮಸ್ಥರಿಗೆ ಕೆಲವು ತೊಂದರೆ ಉಂಟಾಗುತ್ತಿದೆ. ಗ್ರಾಮದ ನಿರಾಶ್ರಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ವಿತರಿಸಲು ಸಚಿವರೊಂದಿಗೆ ಮಾತನಾಡಿ ಕ್ರಮವಹಿಸಲಾಗುವುದು ಎಂದರು.

ಈ ಸಂದರ್ಭ ನಾಡಹಳ್ಳಿ ಗ್ರಾಮದ ಎಂ.ಪ್ರಸಾದ್, ಸಿದ್ದಯ್ಯ, ಎಂ.ಕುಮಾರ್, ಎಸ್.ಸಂತೋಷ್ ಕುಮಾರ್, ಮಾಹಲಿಂಗಸ್ವಾಮಿ, ಮಧುಸೂದನ್, ಎಂ.ಹರೀಶ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net