ಅನೈತಿಕ ಚಟುವಟಿಕೆ ತಾಣ ಹಂದನಕೆರೆ ಅಂಬೇಡ್ಕರ್ ಭವನ ; ಕಟ್ಟಣ ಪೂರ್ಣಗೊಳಿಸಲು ಮೀನಮೇಷ

20Tmk_Handankere_Ambedkar_Bhavana_01
Published on

ತುಮಕೂರು : ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆಯಲ್ಲಿ ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನವು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

2015-16ರಲ್ಲಿ ಸಮಾಜ ಕಲ್ಯಾಣ ಇಲಾಖೆಯು ಹಂದನಕೆರೆಯಲ್ಲಿ ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ ಮಂಜೂರು ಮಾಡಿತ್ತು. ಅಂದಿನ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಐದು ವರ್ಷಗಳಾಗುತ್ತಾ ಬಂದಿದ್ದರೂ ಈವರೆಗೆ ಅಂಬೇಡ್ಕರ್ ಭವನ ಪೂರ್ಣಗೊಳ್ಳದಿರುವುದು ತಾಲೂಕು, ಜಿಲ್ಲಾಡಳಿತಕ್ಕೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೇಲಿನ ಗೌರವಕ್ಕೆ ಸ್ಪಷ್ಟ ನಿದರ್ಶನವಿದ್ದಂತಿದೆ.

50 ಲಕ್ಷ ರೂ., ವೆಚ್ಚದ ಭವನ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಲಕ್ಷ ರೂ., ಅಂದಾಜು ವೆಚ್ಚ ತಯಾರಿಸಿ ಕಾಮಗಾರಿ ಆರಂಭಿಸಲಾಯಿತು. ಜಿಲ್ಲಾಧಿಕಾರಿ ಅಧ್ಯಕ್ಷತೆಯ ನಿರ್ಮಿತಿ ಕೇಂದ್ರಕ್ಕೆ ಭವನ ನಿರ್ಮಾಣ ಜವಾಬ್ದಾರಿ ನೀಡಲಾಯಿತು. ಅಂದಿನಿಂದ ಕುಟುಂತ್ತಾ ಸಾಗಿದ ಭವನವು 2018ರ ಹೊತ್ತಿಗೆ ಒಂದು ಹಂತಕ್ಕೆ ಬಂದು ನಿಂತಿತು. ಅಪೂರ್ಣಗೊಂಡಿರುವ ಭವನವು ಈಗ ಅನೈತಿಕೆ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಹತ್ತಾರು ಬಾರಿ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಕುಂದುಕೊರತೆ ಸಭೆಯಲ್ಲೂ ಗಮನಸೆಳೆದಿದ್ದರೂ ಭವನ ಪೂರ್ಣಗೊಳಿಸುವ ಬಗ್ಗೆ ಯಾರೊಬ್ಬರೂ ಆಸಕ್ತಿ ತೋರಲಿಲ್ಲ. ಅಂಬೇಡ್ಕರ್ ಬಗ್ಗೆ ವೇದಿಕೆ ಮೇಲೆ ಉದ್ದುದ್ದ ಭಾಷಣ ಮಾಡುವ ಅಧಿಕಾರಿಗಳು ಭವನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಡಿಎಸ್‌ಎಸ್ ಸಂಚಾಲಕ ಎಚ್.ಟಿ.ನಾಗರಾಜು ದೂರುತ್ತಾರೆ.

ಅಂಬೇಡ್ಕರ್ 130ನೇ ಜನ್ಮದಿನ ಆಚರಿಸಲಾಯಿತು. ಅನುದಾನ ಇಲ್ಲದೆ ಕುಂಟುತ್ತಾ ಸಾಗಿರುವ ಭವನ ಪೂರ್ಣಗೊಳಿಸಲು ಸರ್ಕಾರದಿಂದ ಬಾಕಿ ಹಣ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಆದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮುಂದಾಗಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನ ಅನೈತಿಕ ಚಟುವಟಿಕೆ ತಾಣವಾಗಿದೆ. ಈ ಬಗ್ಗೆ ಹತ್ತಾರು ಬಾರಿ ತಹಸೀಲ್ದಾರ್, ಎಸಿ ಗಮನಕ್ಕೂ ತರಲಾಗಿದೆ. ಇತ್ತೀಚೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಗಮನ ಸೆಳೆಯಲಾಗಿದೆ. ಜಿಲ್ಲಾ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮೌನವಹಿಸಿರುವುದು ಅಂಬೇಡ್ಕರ್ ಮೇಲೆ ಅವರಿಗಿರುವ ಗೌರವ ತೋರುತ್ತದೆ. ಎಚ್.ಟಿ.ನಾಗರಾಜು ಸಂಚಾಲಕ, ಡಿಎಸ್‌ಎಸ್, ಹಂದನಕೆರೆ ಹಂದನಕೆರೆ ಅಂಬೇಡ್ಕರ್ ಭವನ ನಿರ್ಮಾಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಅನುದಾನ ಕೊರತೆ ಇಂದ ಅಪೂರ್ಣಗೊಂಡಿರಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಪ್ರೇಮಾ ಜಂಟಿ ನಿರ್ದೇಶಕಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net