ಸಂತ ಕಬೀರರನ್ನು ಅಂಬೇಡ್ಕರ್ ಆಧ್ಯಾತ್ಮ ಚಳವಳಿ ಗುರುವಾಗಿ ಸ್ವೀಕರಿಸಿದ್ದರು : ಸಾಹಿತಿ ಪ್ರೊ.ರಹಮತ್ ತರೀಕೆರೆ

Rahmat Tarikere
Published on

ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂತ ಕಬೀರ್ ದಾಸ್‌ರನ್ನು ಅಧ್ಯಾತ್ಮ ಚಳವಳಿಯ ಗುರುವಾಗಿ ಸ್ವೀಕರಿಸಿದ್ದರು ಎಂದು ಸಾಹಿತಿ ಪ್ರೊ.ರಹಮತ್ ತರೀಕೆರೆ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಗುರುವಾರ ‘ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ಸಂತ ಕಬೀರ್ ದಾಸ್ ಚಿಂತನೆಗಳ ತಾತ್ವಿಕ ನೆಲೆ’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಬುದ್ಧರ ಶೂನ್ಯವಾದಕ್ಕೂ ಕಬೀರ್ ಅವರ ನಿರಾಕಾರ ನಿರ್ಗುಣಕ್ಕೂ ಬಹಳ ಸಂಬಂಧ ಇದ್ದು, ಈ ಗುಣವೇ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ಗೆ ಇಷ್ಟವಾಗಿರಬಹುದು ಎಂದರು.

ಒಂದು ಸಮುದಾಯದ ಆರ್ಥಿಕ ಉತ್ಪನ್ನ ಮತ್ತು ಅದರ ಜ್ಞಾನವನ್ನು ಸಮಾಜ ತಿರಸ್ಕರಿಸದಾಗ ಆ ಸಮುದಾಯ ಬಂಡಾಯ ಮನೋಭಾವ ಬೆಳೆಸಿಕೊಳ್ಳುತ್ತದೆ. ಇದನ್ನು ಕಂಡ ಕಬೀರರು ಒಬ್ಬ ಮನುಷ್ಯನ ಜಾತಿ ಅಥವಾ ಒಂದು ಸಮುದಾಯದ ಕಸುಬನ್ನು ನೋಡಿ ಅಲ್ಲಗಳೆಯಬಾರದು. ಅವರಲ್ಲಿರುವ ಆಳವಾದ ಜ್ಞಾನಕ್ಕೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ತಮ್ಮ ಬಹು ಖ್ಯಾತಿಯ ದೋಹಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದರು.

ಒಂದು ಅಲಕ್ಷಿತ ಸಮುದಾಯ, ಅಲಕ್ಷಿತ ವೃತ್ತಿಯ ಜನರಲ್ಲಿರುವ ಸುಜ್ಞಾನವನ್ನು ಸಮಾಜ ಗುರುತಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಹುಟ್ಟಿದ ಬಂಡಾಯದ ಕೂಸು ಕಬೀರದಾಸ್ ಆಗಿದ್ದರು. ಇದೇ ಸಮೀಕರಣವನ್ನು ಬಾಬಾ ಸಾಹೇಬರು ಅನ್ವಯಿಸಿಕೊಂಡರು. ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಅಂಬೇಡ್ಕರ್ ಅವರಿಗೆ ಕಬೀರರ ಇಂತಹ ಚಿಂತನೆಗಳು ಬಹಳ ಮಟ್ಟಿಗೆ ನೆರವಾದವು ಎಂದರು.

ಮೈಸೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ಅಧ್ಯಯನ ವಿಭಾಗದ ಎರಡು ವರ್ಷದ ಪಠ್ಯದಲ್ಲಿ ಕರ್ನಾಟಕದ ಯಾವ ದಾರ್ಶನಿಕರು ಇಲ್ಲದಿರುವುದು ವಿಷಾದನೀಯ. ತತ್ವಪದಗಳ 50 ಸಂಪುಟಗಳು ಕನ್ನಡದಲ್ಲಿ ಬಂದಿದೆ. ಕರ್ನಾಟಕದ ಶರಣ ಪರಂಪರೆ ಎನ್ನುವುದು ಬಹು ದೊಡ್ಡ ದಾರ್ಶನಿಕ ಪರಂಪರೆ. ಭಾರತದ ಯಾವ ಭಾಷೆಯಲ್ಲೂ ಪ್ರಕಟವಾಗದ ತತ್ವ ಪದಗಳ 50 ಸಂಪುಟ ಕನ್ನಡ ನೆಲದಲ್ಲಿ ಪ್ರಕಟವಾಗಿವೆ. ಅವಧೂತರು, ಶರಣರು, ಸೂಫಿಗಳ ಬಗ್ಗೆ ಅಧ್ಯಯನ ನಡೆದಿದೆ. ಅಲ್ಲಮಪ್ರಭು ಅಭಿನವ ಗುಪ್ತರ ಸರಿಸಮನಾಗಿದ್ದಾರೆ. ಕೊನೇಪಕ್ಷ ಕರ್ನಾಟಕದ ದಾರ್ಶನಿಕರ ಒಂದು ಪತ್ರಿಕೆ ಇಡಬೇಕೆಂದು ವಿನಂತಿಸುತ್ತೇನೆ ಎಂದರು.

ಮಾನಸಗಂಗೋತ್ರಿ ತತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಎಂ.ಡ್ಯಾನಿಯಲ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ. ಜೆ.ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net