ಅಂಬೇಡ್ಕರ್ ವಸತಿ ಶಾಲೆ ಎದುರು ಪ್ರತಿಭಟನೆ : ಅವ್ಯವಸ್ಥೆ ಬಯಲು ಮಾಡಿದ ವಿದ್ಯಾರ್ಥಿಗಳು

8_Krt_ph_02
Published on

ಕೊರಟಗೆರೆ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿನ ಅವ್ಯವಸ್ಥೆ, ಅಭ್ರದತೆ, ಹುಳು ಬಿದ್ದಿರುವ ಊಟ, ಪ್ರಾಂಶುಪಾಲರು ಭೋದಕವರ್ಗದ ಕಿತ್ತಾಟ ಸೇರಿ ಹಲವು ಸಮಸ್ಯೆಗಳಿಂದ ಮಕ್ಕಳ ಮನಸಿನ ಮೇಲೆ ಪರಿಣಾಬೀರಿ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ ಎಂದು ಪಾಲಕರು ವಸತಿ ನಿಲಯದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ದೀಪಾವಳಿ ಹಬ್ಬದ ಪ್ರಯುಕ್ತ ಸರಣಿ ರಜಾ ಇರುವ ಕಾರಣ ಮನೆಗಳಿಗೆ ತೆರೆಳಿದ್ದ ವಿದ್ಯಾರ್ಥಿಗಳು ಪಟ್ಟಣದ ಡಾ, ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ಅವ್ಯವಸ್ಥೆ ಬಗ್ಗೆ ಪಾಲಕರಿಗೆ ತಿಳಿಸಿದ ಪರಿಣಾಮ ವಿವಿಧ ತಾಲೂಕುಗಳಿಂದ ಪಾಲಕರು ಮಕ್ಕಳೊಂದಿಗೆ ಆಗಮಿಸಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ಧ ಪ್ರತಿಭಟಿಸಿದರು.

ನಂತರ ಶಾಲೆಯ ಎಲ್ಲ ಮಕ್ಕಳನ್ನು ಒಂದಡೆ ಸೇರಿಸಿ ಪಾಲಕರ ಮುಂದೆ ಪ್ರಾಂಶುಪಾಲರು ಮತ್ತು ಭೋದಕರ ಸಮಸ್ಯೆ ಬಗ್ಗೆ ಆಲಿಸಿದಾಗ ಬಹುತೇಕ ಮಕ್ಕಳು ಅಡುಗೆಯವರ ಬಗ್ಗೆ ಹಾಗೂ ಹಲವು ಬಾರಿ ಹುಳುಬಿದ್ದ ಆಹಾರ ನೀಡಿದ್ದರ ಬಗ್ಗೆ ಆರೋಪಿಸಿದರು. ನಿಲಯದ ತಾತ್ಕಾಲಿಕ ಭದ್ರತಾ ಸಿಬ್ಬಂದಿ ಅನಗತ್ಯವಾಗಿ ಹೆಣ್ಣು ಮಕ್ಕಳ ಕೊಠಡಿಗೆ ಬರುತ್ತಾರೆ, ಈ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಿದರೂ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದರು.

ಭದ್ರತಾ ಸಿಬ್ಬಂದಿ ಪೊಲೀಸ್ ವಶಕ್ಕೆ : ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ನಾಹೀದಾ ಜಂ ಜಂ ವಸತಿ ನಿಲಯ ಪರಿಶೀಲಿಸಿದರು. ಆಹಾರ ದಾಸ್ತಾನು ಕೊಠಡಿಗೆ ಹೋದಾಗ ಕೆಲವು ಪದಾರ್ಥಗಳಲ್ಲಿ ಹುಳು ಬಿದ್ದಿರುವುದನ್ನು ಕಂಡು ಪ್ರಾಶುಪಾಲರನ್ನು ತರಾಟೆ ತೆಗೆದುಕೊಂಡರು. ಆಹಾರ ದಾಸ್ತಾನು ಪುಸ್ತಕ ಮತ್ತು ಊಟದ ಮೆನು ಚಾರ್ಟ್ ಇಲ್ಲದಿರುವುದು, ವಿದ್ಯಾರ್ಥಿ ನಿಲಯದ ಹೆಣ್ಣು ಮಕ್ಕಳನ್ನು ಒಂದೆಡೆ ತರಗತಿಯಲ್ಲಿ ಕರೆಸಿ ಅವರ ಸಮಸ್ಯೆ ಬಗ್ಗೆ ಆಲಿಸಿ, ವೈಯಕ್ತಿಕ ಸಮಸ್ಯೆ ತಿಳಿದ ನಂತರ ಹೊರ ಬಂದು ಪ್ರಾಂಶುಪಾಲರು ಮತ್ತು ಭದ್ರತಾ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

ನಗರ ಠಾಣೆ ಪಿಎಸ್‌ಐ ನಾಗರಾಜು ಅವರಿಗೆ ೆನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡ ತಹಸೀಲ್ದಾರ್, ಭದ್ರತಾ ಸಿಬ್ಬಂದಿ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆತೋರಿದ ಆರೋಪದಡಿ ವಶಕ್ಕೆ ಪಡೆದುಕೊಂಡು, ಕೆಲಸದಿಂದ ವಜಾ ಮಾಡಿದರು. ಇಂತಹ ಸಿಬ್ಬಂದಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಕ್ಕೆ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು, ಅಡುಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಭೋದಕ ವರ್ಗದವರಿಗೂ ಸಹ ತಂದೆ, ತಾಯಿ ರೀತಿ ಬೆರೆತು ಅವರ ಸಮಸ್ಯೆ ಆಲಿಸಿ ಬಗೆಹರಿಸುವಂತೆ ನಿರ್ದೇಶಿಸಿದರು. ಮುಂಬರುವ ದಿನಗಳಲ್ಲಿ ವಸತಿ ಶಾಲೆಯಲ್ಲಿ ದೂರು ಪೆಟ್ಟಿಗೆಯನ್ನು ಇಡುವಂತೆ ಸೂಚಿಸಿ ಅದನ್ನು ಸ್ವತಃ ತಾವೇ ನಿರ್ವಹಿಸುವುದಾಗಿ ಹೆಣ್ಣುಮಕ್ಕಳಿಗೆ ಭರವಸೆ ನೀಡಿ ತಹಸೀಲ್ದಾರ್ ಧೈರ್ಯ ತುಂಬಿದರು.

ತಪ್ಪಿತಸ್ಥರ ವಿರುದ್ಧ ಕ್ರಮ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತ್ಯಾಗರಾಜು ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ದೂರು ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ಕೂಡಾ ಪಾಲಕರಿಗೆ ನೀಡಿದರು. ಹಲವು ನ್ಯೂನತೆಗಳನ್ನು ಸರಿಪಡಿಸುವುದಾಗಿ ತಿಳಿಸಿದರು. ಪ್ರಾಂಶುಪಾಲ ಸುರೇಶ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎನ್ನುವ ಪಾಲಕರ ಅಹವಾಲನ್ನು ಸ್ವೀಕರಿಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net