

ಮೈಸೂರು: ವಿಖ್ಯಾತ ತಾಜ್ ಮಹಲನ್ನೇ ಮೀರಿಸುವಂತೆ ಪ್ರವಾಸಿಗರು ಭೇಟಿ ನೀಡುವ ಮೈಸೂರು ಅಂಬಾವಿಲಾಸ ವೀಕ್ಷಣೆಗೆ ಪ್ರವೇಶ ದರ ಏರಿಕೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಮೈಸೂರು ಅರಮನೆ ಮಂಡಳಿ ಏಕಾಏಕಿ ದರ ಪರಿಷ್ಕರಣೆ ಮಾಡಿದೆ. ಅದಕ್ಕೆ ಆತಿಥ್ಯ ವಲಯಗಳಾದ ಹೋಟೆಲ್, ಟ್ರಾವೆಲ್ಸ್ ಉದ್ಯಮ ಸೇರಿದಂತೆ ಇನ್ನಿತರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನೂತನ ದರದಂತೆ ಸ್ವದೇಶಿಯರಿಗೆ 20 ರೂ. ಹೆಚ್ಚಳ ಮಾಡಿದ್ದರೆ, ವಿದೇಶಿಯರಿಗೆ ನಿರೀಕ್ಷೆ ಮಾಡಿದಂತೆ 900 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅರಮನೆ ಮಂಡಳಿಯ ಈ ಕ್ರಮವೂ ಕೂಡಾ ವ್ಯಾಪಕ ಟೀಕೆಗೆ ಗುರಿಯಾಗಿರುವುದಲ್ಲದೇ, ಏಕಾಏಕಿ ಹೆಚ್ಚಳ ಸರಿಯಲ್ಲ ಎಂದು ಟೀಕೆ ಹೊರಹೊಮ್ಮಿದೆ.
ಅಂಬಾವಿಲಾಸ ಅರಮನೆ ವೀಕ್ಷಿಸಲು ವಯಸ್ಕರಿಗೆ 100 ರೂ. ಇದ್ದ ಟಿಕೆಟ್ ದರ ಈಗ 120 ರೂ. ಆಗಿದೆ. ಅದೇ ರೀತಿ 18 ವರ್ಷ ಒಳಗಿನವರಿಗೆ 50 ರೂ.ಯಿಂದ 70 ರೂ.ಗೆ ಏರಿಕೆ ಮಾಡಲಾಗಿದೆ. ಅಲ್ಲದೇ ಶೈಕ್ಷಣಿಕ ಪ್ರವಾಸ ಬರುವ ಇದ್ಯಾರ್ಥಿಗಳಿಗೆ ಇದ್ದ ಪ್ರವೇಶದ 30 ರೂ. ಅನ್ನು 50 ರೂ.ಗೆ ಏರಿಕೆ ಮಾಡಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಅರಮನೆ ವೀಕ್ಷಣೆಗೆ ಬರುತ್ತಿದ್ದಾರೆ. ಅವರಿಗೆ ಇದ್ದ 100 ರೂ. ದರವನ್ನು ಈಗ ದಿಢೀರ್ ಎಂದು 1,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಟ್ರಾವೆಲ್ಸ್‌ನವರಿಗೆ ಸಮಸ್ಯೆ
ಅರಮನೆ ವೀಕ್ಷಣೆ ಪ್ರವೇಶ ದರದ ಏಕಾಏಕಿ ಪರಿಷ್ಕರಣೆಯಿಂದ ಟ್ರಾವೆಲ್ಸ್ ಏಜೆನ್ಸಿಯವರು ತಕ್ಷಣ ಸಮಸ್ಯೆ ಎದುರಿಸಬೇಕಾಗಿದೆ. ಪ್ರವಾಸಿಗರಿಂದ ಈಗಾಗಲೇ ಪ್ಯಾಕೇಜ್‌ನಂತೆ ದರ ಪಡೆದಿದ್ದ ಏಜೆನ್ಸಿಯರಿಗೆ ವಿದೇಶಿಗರ ದರ ಹೆಚ್ಚುವರಿ ಭರಿಸಬೇಕಾಗಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ಹಿಂದಿನ ದರದ ಅನ್ವಯದಂತೆ ವಿದೇಶಿಯರಿಗೆ ಹಾಗೂ ಬೇರೆ ರಾಜ್ಯದ ಪ್ರವಾಸಿಗರಿಗೆ ಟೂರ್ ಪ್ಯಾಕೇಜ್ ಸಿದ್ಧ ಗೊಳಿಸಿರುತ್ತಾರೆ. ದರವನ್ನು ಹೆಚ್ಚಳ ಮಾಡಿ ಜಾರಿಗೊಳಿಸಿರುವುದರಿಂದ ಪ್ರವಾಸಿಗರಿಗೆ ಏಜೆನ್ಸಿಯವರು ಹೇಗೆ ವಿಚಾರ ತಿಳಿಸಬೇಕು ಎನ್ನುವ ಗೊಂದಲ ಉಂಟಾಗಿರುತ್ತದೆ.
ವಿದೇಶಿ ಪ್ರವಾಸಿಗರು ಮೂರು ತಿಂಗಳ ಮೊದಲೇ ಟೂರ್‌ಬುಕ್ ಮಾಡಿರುತ್ತಾರೆ. ಸ್ಥಳೀಯರು ವಾರ ಅಥವಾ ಮೂರ‌್ನಾಲ್ಕು ದಿನದ ಹಿಂದೆ ಬುಕ್ ಮಾಡಿರುತ್ತಾರೆ. ರಾತ್ರಿ ಕಳೆಯುವುದರೊಳಗೆ ದರ ಪರಿಷ್ಕರಣೆ ಜಾರಿಯಿಂದಾಗಿ ಹೆಚ್ಚಳವಾಗಿರುವ ಮೊತ್ತವನ್ನು ಪ್ರವಾಸಿಗರಿಂದ ಸಂಗ್ರಹ ಮಾಡುವ ಬಗೆ ಹೇಗೆ ಎನ್ನುವ ಆತಂಕವೂ ಟ್ರಾವಲ್ ಏಜೆನ್ಸಿಯವರನ್ನು ಕಾಡುತ್ತಿದೆ. ಅ.24 ದರ ಪರಿಷ್ಕೃತ ದರ ಪ್ರಕಟಿಸಿ, ಮರು ದಿನವೇ ಜಾರಿಗೊಳಿಸಿದರೆ ವಿದೇಶಿ ಪ್ರವಾಸಿಗರಿಂದ 900 ರೂ. ಅನ್ನು ಹೊಂದಾಣಿಕೆ ಮಾಡುವುದು ಹೇಗೆ ಎನ್ನುವುದು ಏಜೆನ್ಸಿಗಳ ಸಮಸ್ಯೆಯಾಗಿದೆ. ಹೆಚ್ಚು ದರ ಕೇಳಿದರೆ ವಾದ-ವಿವಾದ ಉಂಟಾಗುವ, ನಂತರದ ದಿನಗಳಲ್ಲಿ ಏಜೆನ್ಸಿಯಕುರಿತು ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗುವ ಸಂಭವವೂ ಇರುತ್ತದೆ.
ಸಮಯ ನೀಡಬೇಕಿತ್ತು:
ಅರಮನೆ ಮಂಡಳಿಯು ವಿದೇಶಿಯರಿಗೆ ಟಿಕೆಟ್ ದರವನ್ನು ಹೆಚ್ಚಳ ಮಾಡಿರುವ ವಿಚಾರವಾಗಿ ಕಾಲಾವಕಾಶ ಕೊಡಬೇಕಾಗಿತ್ತು. ಇದರಿಂದ ಟ್ರಾವೆಲ್ಸ್ ಏಜೆನ್ಸಿಗಳಿಗೂ ಪ್ಯಾಕೇಜ್ ದರ ನಿಗದಿಗೊಳಿಸಲು ಅನುಕೂಲವಾಗುತ್ತಿತ್ತು. ಅಲ್ಲದೇ ಒಂದೇ ಸಲ ಹೆಚ್ಚಳ ಮಾಡದೇ ಸ್ವಲ್ಪ-ಸ್ವಲ್ಪವಾಗಿ ಹೆಚ್ಚಿಸಬೇಕಾಗಿತ್ತು ಎನ್ನುವ ವಾದವೂ ಕೇಳಿಬರುತ್ತಿದೆ.
ಶೇ.10ರಷ್ಟು ವಿದೇಶಿಗರು
ಅಂಬಾವಿಲಾಸ ಅರಮನೆ ನೋಡಲು ಪ್ರತಿನಿತ್ಯ 10 ಸಾವಿರದಷ್ಟು ಪ್ರವಾಸಿಗರು ಬರುತ್ತಾರೆ. ಶಾಲಾ ರಜೆ ಸಮಯದಲ್ಲಿ, ಹಬ್ಬದ ಸಮಯದಲ್ಲಿ ಸುಮಾರು 30 ಸಾವಿರ ಜನ ಭೇಟಿ ನೀಡುತ್ತಾರೆ. ಅದರಲ್ಲೂ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಪ್ರವಾಸಿಗರು, ಶಾಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ಬರುತ್ತಾರೆ. ಇದೆಲ್ಲವನ್ನೂ ಸರಾಸರಿ ತಗೆದುಕೊಂಡರೆ ನಿತ್ಯ 15ರಿಂದ 18 ಸಾವಿರ ಜನ ಅರಮನೆ ವೀಕ್ಷಣೆಗೆ ಬರುತ್ತಾರೆ. ಇವರಲ್ಲಿ ಶೇ.10 ರಷ್ಟು ವಿದೇಶಿ ಪ್ರವಾಸಿಗರೂ ಇರುತ್ತಾರೆ.
ಡಾಲರ್ ಲೆಕ್ಕದಲ್ಲಿ ದರ ನಿಗದಿ
ವಿದೇಶಿಯರಿಗೆ ಅರಮನೆ ವೀಕ್ಷಣೆ ದರವನ್ನು ಡಾಲರ್ ಲೆಕ್ಕದಲ್ಲಿ ನಿಗದಿಗೊಳಿಸಲಾಗಿದೆ. ಇಲ್ಲಿವರೆಗೂ ಸುಮಾರು ಒಂದು ಕಾಲು ಡಾಲರ್ ನೀಡಬೇಕಾಗಿತ್ತು. ಈಗ 10 ಡಾಲರ್ ಹೆಚ್ಚಾಗಿದೆ. ಇನ್ನೂ ಸ್ವದೇಶಿಯರಿಗೆ 20 ರೂ. ಹೆಚ್ಚಳ ಮಾಡಲಾಗಿದೆ. ಅರಮನೆ ಆವರಣದ ಒಳಗೆ ಚಪ್ಪಲಿ ಸ್ಟಾೃಂಡ್, ಲಗೇಜ್ ಸ್ಟಾೃಂಡ್, ಶೌಚ ಉಚಿತ ಸೇವೆ ದೊರೆಯಲಿದೆ. ಈ ಮೊದಲು ಈ ಸೇವೆಗಳಿಗೆ ವ್ಯಕ್ತಿಯೊಬ್ಬರಿಗೆ ಅಂದಾಜು 28 ರೂ. ಖರ್ಚಾಗುತ್ತಿತ್ತು. ಈಗ 8 ರೂಪಾಯಿ ಉಳಿತಾಯವಾಗುತ್ತಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ತಿಳಿಸಿದ್ದಾರೆ.
ಹೊರೆಯಾಗುವುದಿಲ್ಲ
ಐದು ವರ್ಷದ ಹಿಂದೆ ಅರಮನೆ ಪ್ರವೇಶ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಈಗ ಮಾಡಲಾಗಿದೆ. ವಿದೇಶಿಯರಿಗೆ 100 ರೂ. ನಿಂದ 1,000 ರೂ. ಗೆ ಹೆಚ್ಚಳ ಮಾಡಿರುವುದು ಹೆಚ್ಚಿನ ಹೊರೆ ಅಗುವುದಿಲ್ಲ. ಅರಮನೆ ಮಂಡಳಿ ಚರ್ಚಿಸಿ ಈ ನಿರ್ಧಾರ ಕೈಗೊಂಡಿದೆ.
ಸುಬ್ರಹ್ಮಣ್ಯ
ಉಪ ನಿರ್ದೇಶಕ, ಅರಮನೆ ಆಡಳಿತ ಮಂಡಳಿ
ಹಂತ, ಹಂತವಾಗಿ ಮಾಡಬೇಕಿತ್ತು
ಡಾಲರ್ ಲೆಕ್ಕದಲ್ಲಿ ದರ ಪರಿಷ್ಕರಣೆ ಮಾಡಿದರೇ ವಿದೇಶಿಯರಿಗೆ ಅಂತಹ ಹೆಚ್ಚಳವೇನೂ ಆಗುವುದಿಲ್ಲ. ಆದರೆ ಏಕಾಏಕಿಯಾಗಿ ಮಾಡಬಾರದಾಗಿತ್ತು. ಹಂತ-ಹಂತವಾಗಿ ಹೆಚ್ಚಳ ಮಾಡಬಹುದಾಗಿತ್ತು.
ಸಿ.ಎ. ಜಯಕುಮಾರ್
ಗೌರವಾಧ್ಯಕ್ಷ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್