

ಉಡುಪಿ: ಹಿರಿಯ ಯಕ್ಷಗಾನ ಅರ್ಥಧಾರಿ, ನಾಟಕಕಾರ, ನಿವೃತ್ತ ಪ್ರಾಧ್ಯಾಪಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಅಂಬಾತನಯ ಮುದ್ರಾಡಿ(ಕೇಶವ ಶೆಟ್ಟಿಗಾರ)(85) ವಯೋ ಸಹಜ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ ಮುದ್ರಾಡಿಯ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು , ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.
ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಎಂಟನೇ ತರಗತಿವರೆಗೆ ಶಾಲಾ ವಿದ್ಯಾಭ್ಯಾಸ ಮಾಡಿದ್ದರೂ ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಅಂಬಾತನಯ ಎಂಬ ಕಾವ್ಯನಾಮದಲ್ಲಿ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ.
ಅಂಬಾತನಯ ಮುದ್ರಾಡಿ ಅವರ ವಿಹಾರವಾಚಿಕೆ 1960ರಲ್ಲಿ ಪ್ರಕಟಗೊಂಡಿತು. ಇದು ಚತುರ್ದಶ ಪಥಗಳ (ಸಾನೆಟ್‌ಗಳ) ಸಂಕಲನ. ಇದು ಇವರ ಮೊತ್ತಮೊದಲ ಪ್ರಕಟಿತ ಕೃತಿ, ಇದಕ್ಕೆ ರಾಷ್ಟ್ರಕವಿ ಎಂ. ಗೋವಿಂದ ಪೈ ಮುನ್ನುಡಿ ಬರೆದಿದ್ದಾರೆ. ಕನ್ನಡದ ಎಲ್ಲ ತಲೆಮಾರಿನ ಶ್ರೇಷ್ಠ ವಿದ್ವಾಂಸರ ಸಂಪರ್ಕ ಹೊಂದಿದ್ದ ಅಂಬಾತನಯರು 36 ವರ್ಷ ಶಾಲಾ ಪ್ರಾಥಮಿಕ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಯಕ್ಷಗಾನ ಕಲಾರಂಗದ ಪಾರ್ತಿ ಸುಬ್ಬ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಾದರಗಳಿಗೆ ಪಾತ್ರರಾಗಿದ್ದರು.