

ಉಡುಪಿ: ಎಲ್ಲ ಪ್ರಕಾರಗಳ ಸಾಹಿತ್ಯ ರಚಿಸಿದ್ದಲ್ಲದೆ, ಹರಿಕಥೆಯ ಕೀರ್ತನೆಯನ್ನೂ ಮಾಡುತ್ತಿದ್ದ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರು ಸಾಹಿತ್ಯ ಲೋಕ ಮರೆಯಲಾಗದ ಸವ್ಯಸಾಚಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಣ್ಣಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಮೌನೇಶ ಬಡಿಗೇರ ಅವರಿಗೆ ಅಂಬಾತನಯ ಮುದ್ರಾಡಿ ಸಂಸ್ಕರಣಾ ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶಿಷ್ಟ ಕಾರ್ಯ:
ಪ್ರಶಸ್ತಿ ಪ್ರದಾನ ಮಾಡಿದ ಚಿಂತಕ ಡಾ. ಕೆ.ಎಂ. ರಾವ ನಂಬಿಯಾರ್ ಮಾತನಾಡಿ, ಇದು ಐತಿಹಾಸಿಕ ದಿನ. ನಿರಂತರ 59 ವರ್ಷದಿಂದ ನಾಟಕ ಕ್ಷೇತ್ರದ ಉನ್ನತಿಗಾಗಿ ಶ್ರಮಿಸುತ್ತಿರುವ ಉಡುಪಿಯ ರಂಗಭೂಮಿ ಸಂಸ್ಥೆ ಸಾಹಿತ್ಯ ಕೃತಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ವಿಶಿಷ್ಟ ಕಾರ್ಯ ಎಂದರು.
ಪುಸ್ತಕಕ್ಕೆ ಪ್ರಶಸ್ತಿ:
ರಂಗಭೂಮಿ ಉಡುಪಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಟಕ ಕ್ಷೇತ್ರಕ್ಕೆ ಮೌನೇಶ ಬಡಿಗೇರ ಅವರು ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ರಂಗಭೂಮಿಯ ನಾಟಕೇತರ ಸಾಹಿತ್ಯ ಕೃತಿಗೆ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಮಾನೇಶ ಅವರ "ಅಭಿನಯ ಕಲಿಸಲು ಸಾಧ್ಯವಿಲ್ಲ' ಎಂಬ ಪುಸ್ತಕವು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್ ಉಪಸ್ಥಿತರಿದ್ದರು. ಡಾ. ಪಾರ್ವತಿ ಜಿ. ಐತಾಳ್ ವಂದಿಸಿದರು. ಬೆಳಗೋಡು ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿಚಾರ ಸಂಕಿರಣ, ಟಪಾಲು ಮನೆ ಬಿಡುಗಡೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಪ್ರಶಸ್ತಿಗೆ ಆಯ್ಕೆಯಾದ ಪುಸ್ತಕದ ಕುರಿತು ರಂಗನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರ್ ಹಾಗೂ ಬಾಸುಮ ಕೊಡಗು ವಿಚಾರ ಸಂಕಿರಣ ನಡೆಸಿದರು. ಬಳಿಕ ಸಾಹಿತಿ ಮೌನೇಶ ಬಡಿಗೇರ ವಿರಚಿತ "ಟಪಾಲು ಮನೆ' ಪುಸ್ತಕವನ್ನು ಉಡುಪಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಬಿಡುಗಡೆ ಮಾಡಿದರು. ಚಿಂತಕ ಭುವನ ಪ್ರಸಾದ ಹೆಗ್ಡೆ ಪುಸ್ತಕ ಪರಿಚಯ ಮಾಡಿದರು. ರಂಗಭೂಮಿಯ ಜತೆ ಕಾರ್ಯದರ್ಶಿ ವಿವೇಕಾನಂದ ಎನ್. ವಂದಿಸಿದರು. ಸಹ ಸಂಚಾಲಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.