

ಮಂಡ್ಯ: ದಿವಂಗತ ನಟ ಅಂಬರೀಷ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ಅವರ ಪುತ್ರ ಅಭಿಷೇಕ್ ನಟಿಸಿರುವ ಬ್ಯಾಡ್ ಮ್ಯಾನರ್ಸ್ ಚಿತ್ರ ಬಿಡುಗಡೆ ಅಂಗವಾಗಿ ನ.24ರಂದು ನಗರದಲ್ಲಿ ಕನ್ನಡ ಹಬ್ಬ, ಮೆರವಣಿಗೆ ಹಾಗೂ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಸಂಜಯ ಚಿತ್ರಮಂದಿರದವರೆಗೆ ಅದ್ದೂರಿ ಮೆರವಣಿಗೆ ಇರಲಿದೆ. ವಿವಿಧ ಕಲಾ ಪ್ರಕಾರದ ಕಲಾ ತಂಡಗಳು ಶೃಂಗಾರಗೊಂಡ ಎತ್ತಿನಗಾಡಿ, ಆಟೋ ರಿಕ್ಷಾಗಳು ತಾಯಿ ಭುವನೇಶ್ವರಿ, ಅಂಬರೀಷ್ ಭಾವಚಿತ್ರದ ಮೆರವಣಿಗೆ ಆಯೋಜಿಸಿದ್ದು, ಇದೇ ವೇಳೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತ ಮತ್ತು ಸಂಜಯ ಚಿತ್ರಮಂದಿರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಗರದ ವಿವಿಧ ಕಾಲೇಜಿನಲ್ಲಿ ಅಂಬರೀಷ್ ಅವರಿಗೆ ಸಂಬಂಧಿಸಿದಂತೆ ವಾರ ಪೂರ್ತಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರ ವೀಕ್ಷಕರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಚಿತ್ರ ವೀಕ್ಷಣೆ ಮಾಡಿದ ನಂತರ ಟಿಕೆಟ್ ಹಿಂಭಾಗ ವೀಕ್ಷಕರ ಹೆಸರು ಮತ್ತು ವಿಳಾಸ, ಮೊಬೈಲ್ ನಂಬರ್ ಬರೆದು ಲಕ್ಕಿ ಬಾಕ್ಸ್‌ಗೆ ಹಾಕಬೇಕು. ವಿಜೇತರನ್ನು ಲಕ್ಕಿ ಡ್ರಿಪ್ ಮೂಲಕ ಆಯ್ಕೆ ಮಾಡಿ ಪ್ರತಿವಾರ 5 ಜನರಿಗೆ ಬಹುಮಾನ ನೀಡಲಾಗುವುದು. 24ರಂದು ಬೆಳಗಿನ ಪ್ರದರ್ಶನ ಮುಗಿದ ನಂತರ ಮಧ್ಯಾಹ್ನದ ಪ್ರದರ್ಶನ ಪ್ರಾರಂಭಗೊಳ್ಳುವ ಮುನ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಅರವಿಂದ, ಶಶಿ, ಗಣೇಶ, ಮಹೇಶ, ವಿಶ್ವಾಸ್ ಇತರರಿದ್ದರು.