

ಮೈಸೂರು: ನಾಡಹಬ್ಬ ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆ ಕಾರ್ಯಚರಣೆಯಲ್ಲಿ ವೀರಮರಣ ಹೊಂದಿದ್ದು, ಆನೆಗೆ ಗೌರವ ಸಲ್ಲಿಸುವ ಸಲುವಾಗಿ ಎರಡು ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಳಿಯ ವೀರನಹೊಸಳ್ಳಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಡಹಬ್ಬ ದಸರಾ ಉತ್ಸವದ ಗಜಪಯಣ ಸಮಾರಂಭದಲ್ಲಿ ‘ದಸರಾ-2024ರ ಆನೆಗಳ ಕಿರು ಪುಸ್ತಕ’ ಬಿಡುಗಡೆ ಮಾಡಿ ಮಾತನಾಡಿ, ಕಳೆದ ಬಾರಿ ನಿಶಾನೆ ಆನೆಯಾಗಿದ್ದ ಅರ್ಜುನ ಈ ಬಾರಿ ನಮ್ಮೊಂದಿಗಿಲ್ಲ ಎಂಬ ನೋವು ನಮಗಿದೆ. ಅರ್ಜುನ ಕಾಡಾನೆಯೊಂದಿಗೆ ಹೋರಾಡಿ ಮಡಿದ ಹಾಸನ ಜಿಲ್ಲೆಯ ಯಸಳೂರು ಬಳಿ ಕಳೆದ ತಿಂಗಳು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದರ ಜತೆಗೆ ಅರ್ಜುನ ಆನೆ ಇದ್ದ ಆನೆ ಶಿಬಿರ ಬಳ್ಳೆಯಲ್ಲಿ ಕೂಡ ಒಂದು ಸ್ಮಾರಕ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಬಳಿಯ ಮಾಸ್ತಿಗುಡಿಯಲ್ಲಿ ಮಾಸ್ತಮ್ಮನ ದೇವಸ್ಥಾನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದ ತರುವಾಯ ಸಾಂಪ್ರದಾಯಿಕವಾಗಿ ಗಜಪಯಣ ಆರಂಭವಾಗುತಿತ್ತು. ಆ ಸಂದರ್ಭ ಆನೆಗಳು ನಡೆದುಕೊಂಡು ಹೋಗುತ್ತಿದ್ದ ಮಾರ್ಗದ ಹಳ್ಳಿ ಹಳ್ಳಿಯಲ್ಲೂ ಜನರು ತಳಿರು ತೋರಣ ಕಟ್ಟಿ, ರಂಗವಲ್ಲಿ ಹಾಕಿ, ಆನೆಗಳಿಗೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಕೊಟ್ಟು ಪೂಜಿಸುತ್ತಿದ್ದರು. ಆನೆಗಳು, ಮಾವುತರು, ಕವಾಡಿಗರು ಇಡೀ ಕುಟುಂಬ ಕಾಲ್ನಡಿಗೆಯಲ್ಲಿ ಮೈಸೂರಿಗೆ ಬರುತ್ತಿತ್ತು ಎಂದು ಕೇಳಿದ್ದೇನೆ. ಈಗ ಸಾಂಕೇತಿಕವಾಗಿ ಇಲ್ಲಿ ಆನೆಗಳು ಮತ್ತು ಮಾವುತರು ಸ್ವಲ್ಪ ದೂರ ಮಾತ್ರ ಹೆಜ್ಜೆ ಹಾಕಿದ ತರುವಾಯ ಲಾರಿಗಳಲ್ಲಿ ಆನೆಗಳನ್ನು ಮೈಸೂರಿಗೆ ಕಳುಹಿಸಲಾಗುತ್ತಿದೆ. ಆದರೂ ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಎಲ್ಲ ರೀತಿಯ ವಿಧಿ ವಿಧಾನ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.