ಕೆವಿಎಸ್, ಅಂಬರೀಷ್ ಭಾವಚಿತ್ರ ಬಳಸಿ: ಅಭಿಮಾನಿಗಳ ಸಂಘದ ಅಧ್ಯಕ್ಷ ಕಾಚೋವಳ್ಳಿ ನಂಜೇಗೌಡ ಆಗ್ರಹ

Ambareesh Fans Association Press Conference Mandya
Published on

ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನಿತ್ಯ ಸಚಿವ ಕೆ.ವಿ.ಶಂಕರಗೌಡ ಮತ್ತು ದಿವಂಗತ ನಟ ಡಾ.ಎಂ.ಎಚ್.ಅಂಬರೀಷ್ ಭಾವಚಿತ್ರ ಬಳಸಬೇಕು ಎಂದು ಅಖಿಲ ಕರ್ನಾಟಕ ಧರ್ಮರಾಯ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕಾಚೋವಳ್ಳಿ ನಂಜೇಗೌಡ ತಿಳಿಸಿದರು.

ಅಂಬರೀಷ್ ಹಾಗೂ ಕೆ.ವಿ.ಶಂಕರಗೌಡ ಅವರು ರಾಜಕೀಯ ಹೊರತುಪಡಿಸಿ ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರನ್ನು ಸಮ್ಮೇಳನದ ಸಂದರ್ಭದಲ್ಲಿ ನೆನೆಯುವುದು ಮುಖ್ಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಂಬಂಧ ಸರ್ಕಾರ, ಸಾಹಿತ್ಯ ಪರಿಷತ್‌ನ ಸಮಿತಿಗಳಾಗಲಿ ಅವರು ನೀಡುವ ಜಾಹೀರಾತು, ಭಿತ್ತಿಪತ್ರ, ಆಹ್ವಾನ ಹಾಗೂ ಪ್ರಚಾರದ ಪ್ರತಿಗಳಲ್ಲಿ ಬಳಸದೇ ಇರುವುದು ವಿಷಾದನೀಯ ಸಂಗತಿ. ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕಲಾಸೇವೆ ನೀಡಿ, ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಟ್ಟಕ್ಕೆ ಕೊಂಡೊಯ್ದ ಮಹಾನ್ ಚೇತನ ಅಂಬರೀಷ್ ಮತ್ತು ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿ, ಕಲೆ ಹಾಗೂ ರೈತರ ಧ್ವನಿಯಾಗಿದ್ದ ಕೆ.ವಿ.ಶಂಕರಗೌಡ ಅವರ ಭಾವಚಿತ್ರವನ್ನು ಸಮ್ಮೇಳನ ಸಂಬಂಧಿತ ವಿಷಯಗಳಲ್ಲಿ ಬಳಸಬೇಕು. ಹಾಗೆಯೇ ಸಮ್ಮೇಳನದ ಯಾವುದಾದರೂ ದ್ವಾರಕ್ಕೆ ಅಂಬರೀಷ್ ಅವರ ಹೆಸರನ್ನು ಇಡುವಂತೆ ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಮೇಶ್‌ಗೌಡ, ಕುಮಾರ್, ಶಿವರಾಜ್‌ಗೌಡ, ಸ್ವಾಮಿಗೌಡ, ವರದರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net