ಆಳಕ್ಕೆ ಇಳಿದರೆ ಎತ್ತರಕ್ಕೆ ಏರಲು ಸಾಧ್ಯ: ಕ್ಯಾ.ಗಣೇಶ್​ ಕಾರ್ಣಿಕ್​

UDP-25-2-Samaaropa
Published on

ಉಡುಪಿ: ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಅಧ್ಯಯನದ ಆಂತರಿಕ ಸೌಂದರ್ಯ ಪ್ರಜ್ಞೆ ಬೆಳೆಯಬೇಕು. ಹೀಗಾಗಿ ಕಲಿಕೆಯ ಸಂದರ್ಭದಲ್ಲಿ ಆಳಕ್ಕೆ ಇಳಿದು ಮನನ ಮಾಡಿಕೊಂಡು ಆರೋಗ್ಯಕರ ಸ್ಪರ್ಧೆಯಿಂದ ಮುಂದೆ ಸಾಗುತ್ತಿರಬೇಕು. ಆಗ ಸಹಜವಾಗಿಯೇ ಈ ಕ್ಷೇತ್ರದಲ್ಲಿ ಎತ್ತರಕ್ಕೆ ಏರಲು ಸಾಧ್ಯ ಎಂದು ವಿಪ ಮಾಜಿ ಸದಸ್ಯ ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್​ ಹೇಳಿದರು.

ಅಂಬಲಪಾಡಿ ಜನಾರ್ದನ-ಮಹಾಕಾಳಿ ದೇವಸ್ಥಾನದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್​ ಕದ್ರಿ ವತಿಯಿಂದ ನಡೆದ ಎರಡು ದಿನಗಳ ಕರಾವಳಿ ನೃತ್ಯ ಕಲಾವಿದರ ನೃತ್ಯೋತ್ಕರ್ಷ ನೃತ್ಯ ಸಮ್ಮೇಳನದ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಾಂಸತಿಕ ಟ್ರಸ್ಟ್​ ಮೈಸೂರಿನ ನಿರ್ದೇಶಕ, ನೂಪುರ ಕಲಾವಿದ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್​ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಎಸ್​ಡಿಪಿ ರೆಮಿಡೀಸ್​ ಆ್ಯಂಡ್​ ರೀಸರ್ಚ್​ ಸೆಂಟರ್​ ಪುತ್ತೂರಿನ ಡಾ. ಹರಿಕೃಷ್ಣ ಪಾಣಾಜೆ, ಸಮ್ಮೇಳನ ಸಮಿತಿ ಅಧ್ಯಕ್ಷ ಕರ್ನಾಟಕ ಕಲಾಶ್ರೀ ಪಿ. ಕಮಲಾಕ್ಷ ಆಚಾರ್​ ಉಪಸ್ಥಿತರಿದ್ದರು. ಪರಿಷತ್​ನ ಸ್ಮರಣ ಸಂಚಿಕೆ ಸಿದ್ಧಪಡಿಸಲು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನಾಟ್ಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಚಾರಗೋಷ್ಠಿ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ "ಭರತನಾಟ್ಯ ಪ್ರದರ್ಶನಕ್ಕೆ ಶಾಸ್ತ್ರದ ಪ್ರಾಮುಖ್ಯತೆ' ಕುರಿತ ಅಂತಿಮ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ವಿದುಷಿ ರೂಪಶ್ರೀ ಮಧುಸೂದನ ಮಾತನಾಡಿ, ಶಾಸ್ತ್ರ ಎನ್ನುವುದು ಕನ್ನಡಿಯೊಳಗಿನ ಕಗ್ಗಂಟು ಇದ್ದಂತೆ. ಅದನ್ನು ಗುರು ಮೂಲಕ ಕಲಿತರೆ ಮಾತ್ರ ಆ ವಿದ್ಯೆ ಅರ್ಥವಾಗುತ್ತದೆ, ಪ್ರದರ್ಶಿಸುವಾಗ ಅರ್ಥಪೂರ್ಣವಾಗಿಯೂ ಮೂಡಿಬರುತ್ತದೆ ಎಂದು ಉಪಕಥೆಗಳ ಮೂಲಕ ಮನದಟ್ಟು ಮಾಡಿದರು. ಕರ್ನಾಟಕ ಕಲಾಶ್ರೀ ವಿದುಷಿ ಸುಪರ್ಣಾ ವೆಂಕಟೇಶ್​ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಕರಾವಳಿ ನೃತ್ಯ ಕಲಾಪರಿಷತ್​ನ ಧ್ಯೇಯ ಗೀತೆಯನ್ನು ಧ್ವನಿಸುರುಳಿ ಮೂಲಕ ಪಸ್ತುತ ಪಡಿಸಲಾಯಿತು. ಪರಿಷತ್​ ಕಾರ್ಯಾಧ್ಯಕ್ಷ ವಿದ್ವಾನ್​ ಯು.ಕೆ. ಪ್ರವಿಣ ಸ್ವಾಗತಿಸಿದರು. ವಿದ್ಯಾಶ್ರೀ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಪರಿಷತ್​ ಕಾರ್ಯದರ್ಶಿ ವಿದ್ವಾನ್​ ಸುಧೀರ್​ ರಾವ್​ ಕೊಡವೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net