ಅಂಬಾ ಅಜ್ಜಿಗೆ 101ರ ಸಂಭ್ರಮ

amba new
Published on

ಗಂಗಾಧರ ಕಲ್ಲಪಳ್ಳಿ ಸುಳ್ಯ

ವಿಶಾಲವಾಗಿ ಹರಡಿದ ಐದು ತಲೆಮಾರಿನ ಕುಟುಂಬ ವೃಕ್ಷದ ಮಹಾತಾಯಿಗೆ ಅ.11ರಂದು ನೂರ ಒಂದರ ಸಂಭ್ರಮ. ಐದು ತಲೆಮಾರಿನ ಹಿರಿಯರಾದ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಬಾಚೋಡಿ ಮನೆಯ ಅಂಬಾ ಯಾನೆ ಭಾಗೀರಥಿ ಪೈಗೆ ಇಂದು 101ನೇ ಜನ್ಮದಿನಾಚರಣೆ.

ಮೊದಲ ತಲೆಮಾರಿನ ಭಾಗೀರಥಿ ಪೈ ಮತ್ತು ಐದನೇ ತಲೆಮಾರಿನ ನಾಲ್ಕು ತಿಂಗಳ ಮಗು ಇಷಾ. ಹೀಗೆ ಐದು ತಲೆಮಾರಿನ ಕುಟುಂಬದ 108 ಮಂದಿ ಒಟ್ಟು ಸೇರಿ ಈ ಜನ್ಮದಿನದ ಸಂಭ್ರಮವನ್ನು ಅ.11ರಂದು ಬಾಚೋಡಿಯ ಮನೆಯಲ್ಲಿ ಆಚರಿಸಲಾಗುತ್ತದೆ.

ಬಾಚೋಡಿ ರಾಯ ಪೈ ಅವರ ಪತ್ನಿ ಭಾಗೀರಥಿ ಪೈ ಅವರದ್ದು ತುಂಬು ಸಂಸಾರ. ಇವರಿಗೆ 10 ಗಂಡು ಮತ್ತು 4 ಹೆಣ್ಣು ಸೇರಿ 14 ಮಂದಿ ಮಕ್ಕಳು. ಸಂಸಾರದ ವೃಕ್ಷ ಹರಡಿ ಐದನೇ ತಲೆಮಾರಿಗೆ ವಿಸ್ತರಿಸಿದೆ. ಐದು ತಲೆಮಾರಿನ ಮುಕುಟದಲ್ಲಿ ಹಿರಿಯರಾಗಿ ಅಂಬಾ ಪೈ ಬಾಚೋಡಿಯ ಮನೆಯನ್ನು ಬೆಳಗುತ್ತಾರೆ.

ವಿಶಾಲ ಕುಟುಂಬ ವೃಕ್ಷ: ರಾಯ ಪೈ ಮತ್ತು ಭಾಗೀರಥಿ ಪೈ ಅವರು 72 ವರ್ಷದ ಸುಧೀರ್ಘ ದಾಂಪತ್ಯ ಜೀವನ ನಡೆಸಿದ್ದಾರೆ. 2003ರಲ್ಲಿ 93ನೇ ವಯಸ್ಸಿನಲ್ಲಿ ರಾಯ ಪೈ ಅಗಲಿದ ಬಳಿಕ ಈ ಕುಟುಂಬ ವೃಕ್ಷದ ಮೊದಲ ತಲೆಮಾರಿನಲ್ಲಿ ಹಿರಿಯಜ್ಜಿ ಭಾಗೀರಥಿ ಪೈ.

5 ತಲೆಮಾರಿನ ಪೈಕಿ ಕುಟುಂಬದ 116 ಮಂದಿಯಲ್ಲಿ ಈಗ 108 ಮಂದಿ ಸದಸ್ಯರು ಇದ್ದಾರೆ. ಭಾಗೀರಥಿ ಪೈ ಅವರ ಹಿರಿಯ ಮಗಳಿಗೆ 81 ವರ್ಷ ಪ್ರಾಯ ಇದ್ದರೆ ಕಿರಿಯ ಪುತ್ರ ಉದಯ ಅವರಿಗೆ 57 ವರ್ಷ. ಕುಟುಂಬದಲ್ಲಿ 8 ಜನ ಅಜ್ಜಂದಿರು, 10 ಮಂದಿ ಅಜ್ಜಿಯಂದಿರು ಎರಡು ಮಂದಿ ಮುತ್ತಜ್ಜಿಯರು ಇದ್ದಾರೆ.

ಆರೋಗ್ಯಯುತ ಅಜ್ಜಿ: ತನ್ನ 101ನೇ ವಯಸ್ಸಿಗೆ ಕಾಲಿಡುವ ಸಂದರ್ಭದಲ್ಲಿ ಉತ್ತಮ ಆರೋಗ್ಯದಿಂದ ಇರುವ ಭಾಗೀರಥಿ ಪೈ ಅವರು ನಗುಮೊಗದ ಪ್ರೀತಿ ಮತ್ತು ವಾತ್ಸಲ್ಯದಿಂದ ಎಲ್ಲರನ್ನು ಬರ ಮಾಡಿಕೊಳ್ಳುತ್ತಾರೆ. ಈಗಲೂ ತಮ್ಮ ಆಹಾರ, ಔಷಧ ಸೇವನೆ, ಮುಖ ತೊಳೆಯುವುದು, ಸ್ನಾನ ಮಾಡುವುದು ಸೇರಿದಂತೆ ತನ್ನ ಕೆಲಸಗಳನ್ನು ತಾನೇ ಮಾಡುತ್ತಾರೆ. ಹಿರಿತನವನ್ನು ಪರಿಗಣಿಸಿ ಹಲವು ಕಡೆಯಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಹಬ್ಬದ ವೇಳೆ ಸಂಭ್ರಮ

ಭಾಗೀರಥಿ ಪೈ ಅವರ ಮಕ್ಕಳು ಮದುವೆಯಾಗಿ, ಉದ್ಯೋಗ ನಿಮಿತ್ತ ಬೇರೆ ಬೇರೆ ಕಡೆಗಳಿಗೆ ಹೋಗಿ ನೆಲೆಸಿದ್ದರೂ ಇವರೆಲ್ಲರಿಗೂ ಮೂಲಮನೆ ಇದೇ. ಪುತ್ರ ವೆಂಕಟೇಶ ಪೈ ಮತ್ತು ಕುಟುಂಬ ಭಾಗೀರಥಿ ಪೈ ಅವರೊಂದಿಗೆ ಬಾಚೋಡಿ ಮೂಲಮನೆಯಲ್ಲಿ ನೆಲೆಸಿದ್ದಾರೆ. ಹಬ್ಬದ ಸಮಯದಲ್ಲಿ ಐದು ತಲೆಮಾರಿನ ಎಲ್ಲರೂ ಈ ಮನೆಯಲ್ಲಿ ಒಟ್ಟಾಗಿ ಸಂಭ್ರಮಿಸುತ್ತಾರೆ.

ಒಂದು ಕುಟುಂಬದಲ್ಲಿ ಮಾತೃ ಸ್ಥಾನ ಎಷ್ಟು ಪ್ರಾಮುಖ್ಯವಾದುದು ಎಂಬುದಕ್ಕೆ ಉತ್ತಮ ಉದಾಹರಣೆ ನಮ್ಮ ತಾಯಿ. ಐದು ತಲೆಮಾರಿಗೆ ವಿಸ್ತರಿಸಿದ ನಮ್ಮ ಕುಟುಂಬಕ್ಕೆ ಅವರೇ ಹಿರಿಯರು. ಅವರ ನೂರ ಒಂದನೇ ಜನ್ಮದಿನ ಆಚರಿಸುವುದು ನಮ್ಮ ಪುಣ್ಯ.

-ಬಿ.ಪ್ರಕಾಶ್ ಪೈ (ಪುತ್ರ) ಕುಟುಂಬ ಪ್ರಬೋಧನ್ ಸಂಯೋಜಕರು

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ಜಿಲ್ಲೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net