

ಮೈಸೂರು: ಉತ್ತಮ ಪ್ರದರ್ಶನ ನೀಡಿದ ಮೈಸೂರು ಸೈಕಲ್ ಪೋಲೋ ಸಂಘ ಹಾಗೂ ಗಂಗೋತ್ರಿ ಪಬ್ಲಿಕ್ ಸ್ಕೂಲ್ ತಂಡಗಳು 3ನೇ ವರ್ಷದ ಜಿಲ್ಲಾ ಮಟ್ಟದ ಸೈಕಲ್ ಪೋಲೋ ಪಂದ್ಯಾವಳಿಯ ಎಲ್ಲ ವಿಭಾಗದಲ್ಲೂ ಸಾರ್ವಭೌಮ ಸಾಧಿಸಿವೆ.
ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ವತಿಯಿಂದ ನಗರದ ಗೌತಮ್ ಹಾಸ್ಟೆಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪಂದ್ಯಾವಳಿಯ ಪುರುಷರ ಸೀನಿಯರ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಮೈಸೂರು ಸೈಕಲ್ ಪೋಲೋ ಸಂಘದ ತಂಡವು 6-4 ಗೋಲುಗಳಿಂದ ಗಂಗೋತ್ರಿ ಪಬ್ಲಿಕ್ ಸ್ಕೂಲ್ ತಂಡದ ವಿರುದ್ಧ ಜಯ ಸಾಧಿಸಿತು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಗಂಗೋತ್ರಿ ಪಬ್ಲಿಕ್ ಸ್ಕೂಲ್ ತಂಡವು 5-3 ಗೋಲುಗಳಿಂದ ಮೈಸೂರು ಸೈಕಲ್ ಪೋಲೋ ಸಂಘದ ತಂಡದವನ್ನು ಮಣಿಸಿತು.
18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ಸೈಕಲ್ ಪೋಲೋ ಸಂಘದ ತಂಡವು 4-1 ಗೋಲುಗಳಿಂದ ಗಂಗೋತ್ರಿ ಪಬ್ಲಿಕ್ ಸ್ಕೂಲ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಮಹಿಳೆಯರ ಸೀನಿಯರ್ಸ್ ವಿಭಾಗದಲ್ಲಿ ಮೈಸೂರು ಸೈಕಲ್ ಪೋಲೋ ಸಂಘದ ತಂಡವು 4-0 ಗೋಲುಗಳಿಂದ ಹಾಗೂ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 6-1 ಗೋಲುಗಳಿಂದ ಗಂಗೋತ್ರಿ ಪಬ್ಲಿಕ್ ಸ್ಕೂಲ್ ತಂಡವನ್ನು ಮಣಿಸಿತು.
ಪಂದ್ಯಾವಳಿಯಲ್ಲಿ ಜಿಲ್ಲೆಯ ಎಲ್ಲ ಭಾಗದಿಂದ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್‌ನಾಯಕ್ ಜಯ ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಿದರು. ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಸಂಸ್ಥಾಪಕ ಅರುಣ್‌ಕುಮಾರ್ ಎಚ್.ಪಾಟೀಲ್, ಆಯೋಜಕರಾದ ಅಕ್ಷಯ್ ಪಾಟೀಲ್, ಕೀರ್ತಿ ಕುಮಾರ್, ಮಹದೇವ ಪ್ರಸಾದ್, ರಕ್ಷಿತ್ ಇತರರು ಇದ್ದರು.