

ಗೋಕರ್ಣ: ಬೃಹತ್ ಜಾತಕದಂತಹ ಕೃತಿ ರಚಿಸಿದ ಖಗೋಳ ಶಾಸ್ತ್ರದ ಅತ್ಯಪೂರ್ವ ಜ್ಞಾನನಿಧಿ, ವರಾಹ ಮಿಹಿರರಂತಹ ವಿದ್ವನ್ಮಣಿಗಳ ಅಪಾರ ಪರಿಶ್ರಮದ ಫಲವಾಗಿ ರೂಪಗೊಂಡಿರುವ ಜ್ಯೋತಿಷ ಶಾಸ್ತ್ರ ಅಥವಾ ಜಾತಕ ವಿದ್ಯೆ ಕೇವಲಹರಿಕಥಾ ಪ್ರಹಸನವಲ್ಲ. ಅಥವಾ ಅಂತೆ-ಕಂತೆಗಳ ಬುರುಡೆ ಪುರಾಣವಲ್ಲ. ಈ ಶಾಸ್ತ್ರದ ಒಳಹೊಕ್ಕವರಿಗೆ ಮಾತ್ರ ಶಾಸ್ತ್ರದ ಬೆರಗು ಹುಟ್ಟಿಸುವ ಅದ್ಭುತಗಳ ಮಹಾದರ್ಶನವಾಗುತ್ತದೆ ಎಂದು 31ನೇ ಅನಾವರಣ ಚಾತುರ್ಮಾಸ್ಯದ ದೀಕ್ಷಾಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ’ಕಾಲ’ ಕುರಿತ ಸರಣಿ ಪ್ರವಚನದಲ್ಲಿ ಗುರುಗ್ರಹ ಸ್ವಭಾವ ನಿರೂಪಣೆಯಲ್ಲಿ ವಿವರಿಸಿದರು.
ಜ್ಯೋತಿಷ ವಿದ್ಯೆ ಸಂಪೂರ್ಣವಾಗಿ ತರ್ಕಾಧಾರಿತವಾದ ಸವಿವರಾತ್ಮಕ ಶಾಸ್ತ್ರವಾಗಿದೆ. ಸಾವಿರಾರು ವರ್ಷಗಳ ಹಿಂದೆ ಟೆಲಿಸ್ಕೋಪ್‌ನಂತಹ ಯಾವುದೇ ಸಾಧನ ಸಲಕರಣೆಗಳ ಸಹಾಯವಿಲ್ಲದ ಸಮಯದಲ್ಲಿ ಕೇವಲ ಗಣಿತ ಶಾಸ್ತ್ರದ ಮೂಲಕ ಗ್ರಹಗಳ ಗತಿಚಲನೆಯನ್ನು ಅಳೆದು ತಿಳಿದು ಕರಾರುಬದ್ಧವಾಗಿ ಶಾಸ್ತ್ರ ರಚನೆ ಮಾಡಿರುವುದು ಸಾಮಾನ್ಯ ಕಾರ್ಯವಲ್ಲ. ಈ ಶಾಸ್ತ್ರದ ಬಗ್ಗೆ ಹಗುರವಾಗಿ ಮಾತನಾಡುವವರು ಮೊದಲು ಇದರ ಒಳ ಹೊಕ್ಕು ನೋಡಿ ಅರ್ಥಮಾಡಿಕೊಳ್ಳುವಂತಾಗಲಿ. ಆಗ ಜ್ಯೋತಿಷದ ಮಹತಿ ಮತ್ತು ಮೌಲ್ಯದ ಸತ್ಯಾರ್ಥ ದರ್ಶನವಾಗುತ್ತದೆ. ಈ ಶಾಸ್ತ್ರದಿಂದ ಮೈಯೊಳಗಿನ ಕಲೆ, ಚರ್ಮದ ಮೇಲಿನ ಮಚ್ಚೆಯನ್ನೂ ಪತ್ತೆ ಮಾಡಿ ಹೇಳಬಹುದೆಂದರೆ ಈ ಶಾಸ್ತ್ರದ ನಿಖರತೆ ಮತ್ತು ನಿರ್ದಿಷ್ಟತೆ ಎಷ್ಟು ಎನ್ನುವುದು ಅರಿವಿಗೆ ಬರುತ್ತದೆ ಎಂದರು.
ಜಾತಕದಲ್ಲಿ ಗ್ರಹಗಳ ಬಲ ಹೆಚ್ಚಿದ್ದರೆ ಒಳ್ಳೆಯ ಮತ್ತು ಬಲ ಕ್ಷೀಣವಾಗಿದ್ದರೆ ಕೆಟ್ಟ ಫಲ ಲಭ್ಯವಾಗುತ್ತದೆ ಎನ್ನುವುದು ಸಾಮಾನ್ಯ ರೂಢಿ. ಆದರೆ, ಗುರುಗ್ರಹಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಎಂತಹ ಸ್ಥಿತಿಯಲ್ಲೂ ಗುರು ಒಳಿತು ಮಾಡುವುದನ್ನು ಬಿಡುವುದಿಲ್ಲ. ನಾಶ ಸ್ಥಾನವಾದ ಎಂಟನೇ ಮನೆಯಲ್ಲಿದ್ದರೂ ಗುರು ಶುಭಕಾರಕನೇ. ಈ ಹಿನ್ನೆಲೆಯಲ್ಲಿ ಇಂತಹ ಅನುಪಮವಾದ ಶಾಸ್ತ್ರಕ್ಕೆ ಹಾಗೂ ನವಗ್ರಹಗಳಿಗೆ ಸರ್ವತ್ರ ಗೌರವ ಕೊಡುವ ಕಾರ್ಯ ಸರ್ವರಿಂದಾಗಲಿ. ಆ ಮೂಲಕ ಗ್ರಹಗಳ ಅನುಗ್ರಹ ಫಲದಿಂದ ಎಲ್ಲರ ಬಾಳು ಶುಭವಾಗಲಿ ಎಂದರು.
ಶ್ರೀಮಠದ ಶ್ರೀಭಾರತೀ ಪ್ರಕಾಶನ ಹೊರತಂದ ಕೃತಿಗಳು, ಪ್ರಕಾಶನದ ನೂತನ ಜಾಲತಾಣ ಮತ್ತು ಲಾಂಛನದ ಅನಾವರಣದ ಬಗ್ಗೆ ಮಾತನಾಡಿದ ಶ್ರೀಗಳು, ಪ್ರಕಾಶನದ 25 ವರ್ಷಗಳ ಸಾಧನೆ ಐತಿಹಾಸಿಕವಾದುದು. ಪ್ರಕಾಶನ ನಿಃಶಬ್ದವಾಗಿ ದೊಡ್ಡ ಸಾಧನೆಯ ಮೂಲಕ ಅಮೂಲ್ಯ ಗ್ರಂಥಗಳನ್ನು ನಾಡಿಗೆ ನೀಡಿದೆ. ಈ ಅಕ್ಕರದ ಅಕ್ಷರ ಸೇವೆಯಲ್ಲಿ ಕಾರ್ಯಕರ್ತರ ಶ್ರಮ ಬಹಳವಿದೆ. ಇದೇ ರೀತಿ ಈ ಕಾಲಕ್ಕೆ ಅತ್ಯಂತ ಅಗತ್ಯವಿರುವ ಜಾಲತಾಣ ಕೂಡ ಅನಾವರಣಗೊಂಡಿದೆ. ಜಾಲ ಅಂದರೆ ಬಲೆ. ಆದರೆ, ಎಲ್ಲ ಬಲೆಯೂ ಕೆಟ್ಟದ್ದು ಅಂತಲ್ಲ. ಒಳ್ಳೆಯದನ್ನು ಮಾಡುವ ಬಲೆಗಳೂ ಇವೆ. ಈ ಬಲೆ ಎಲ್ಲರ ಬಂಧನದಿಂದ ಬಿಡಿಸಿ ದುಃಖ ದೂರಮಾಡುವ ಸತ್ಕಾರ್ಯಕ್ಕೆ ಮುಂದಾಗಲಿ ಎಂದು ಹರಸಿದರು.
ಶ್ರೀಮಠದ ಸೇವಾಕರ್ತರಾದ ಎಂ.ಆರ್.ಹೆಗಡೆ ಮತ್ತು ಬಾಲಚಂದ್ರ ಕೃಷ್ಣ ಹೆಗಡೆ ಅನಾವರಣ ಕೈಗೊಂಡರು.
ಅಖಿಲ ಹವ್ಯಕ ಮಹಾಸಭೆಯಿಂದ ಆಯೋಜಿತವಾದ ಸರ್ವಸೇವೆಯನ್ನು ನಿರ್ದೇಶಕ ಆರ್.ಜಿ. ಹೆಗಡೆ ಹೊಸಾಕುಳಿ ನೆರವೇರಿಸಿದರು.
ಪ್ರ.ಕಾರ್ಯದರ್ಶಿ ವೇಣು ವಿಘ್ನೇಶ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ , ಪ್ರ.ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ ಮತ್ತಿತರರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ನಿರ್ವಹಿಸಿದರು.