ಕಣ್ಣಿಗೆ ಬಟ್ಟೆ ಕಟ್ಟಿದ್ರೂ ಈ ಬಾಲಕನಿಗೆ ಎದುರಿನದೆಲ್ಲ ಕಾಣುತ್ತೆ!!

amazing-boy
Published on

ಕಾರವಾರ: ಬಾಲಕನೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ವಾಹನ ಓಡಾಡುವ ರಸ್ತೆಯಲ್ಲಿ 5 ಕಿಮೀ ಸಲೀಸಾಗಿ ರೋಲರ್ ಸ್ಕೇಟಿಂಗ್ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ.
ಶಿರಸಿಯ ಅದ್ವೈತ ಕಿರಣ ಕುಮಾರ್ ಕುಡಾಳಕರ್ ಕಾರವಾರ ನಗರದೆಲ್ಲೆಡೆ ಬುಧವಾರ ಸ್ಕೇಟಿಂಗ್ ಮಾಡಿ, ಮೇ 7 ರಂದು ಎಲ್ಲರೂ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಿದ.
ಸೇಂಟ್ ಅಂಟೋನಿ ಶಾಲೆಯಲ್ಲಿ 5 ನೇ ತರಗತಿ ಓದುತ್ತಿರುವ ಅದ್ವೈತ 6 ವರ್ಷದಿಂದ ಸ್ಕೇರಿಂಗ್ ಕಲಿಯುತ್ತಿದ್ದಾನೆ. ಕೆಲ ತಿಂಗಳ ಹಿಂದೆ ಹಾವೇರಿಯಲ್ಲಿ ಆಯೋಜನೆಯಾಗಿದ್ದ ಶಿಬಿರದಲ್ಲಿ ಗಾಂಧಾರಿ ವಿದ್ಯೆಯನ್ನು ಸಂತೋಷ ಗುರೂಜಿ ಎಂಬುವವರ ಬಳಿ ಕಲಿತು, ಸಾಧನೆಗೆ ಸಜ್ಜಾಗಿದ್ದಾನೆ.
ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೋಟುಗಳನ್ನು, ಬಣ್ಣವನ್ನು ಗುರುತಿಸಿ,ನೋಟುಗಳ ನೋಂದಣಿ ಸಂಖ್ಯೆಯನ್ನು ಓದಿ ಅಚ್ಚರಿ ಮೂಡಿಸಿದ. ಇದುವರೆಗೆ ವಿಶ್ವದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 345 ಮೀಟರ್ ರೋಲರ್ ಸ್ಕೇಟಿಂಗ್ ಮಾಡಿದ ದಾಖಲೆ ಇದೆ. ಬುಧವಾರ ಅದ್ವೈತ ಆ ದಾಖಲೆ ಮುರಿದಿದ್ದಾನೆ. ವಿಶ್ವ ದಾಖಲೆಯ ಪುಸ್ತಕಗಳಿಗೆ ವಿವರಗಳನ್ನು ಕಳಿಸಿ, ಪ್ರಮಾಣಪತ್ರ ಪಡೆಯಬೇಕಿದೆ.
ಕಾರವಾರದ ಅಂಬೇಡ್ಕರ್ ಸರ್ಕಲ್‌ನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಿ, ಅದ್ವೈತ ದಾಖಲೆ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ನಗರಸಭೆ ಪೌರಾಯುಕ್ತ ರವಿಕುಮಾರ್, ದಸಂಸ ರಾಜ್ಯ ಸಂಚಾಲಕ ದೀಪಕ ಕುಡಾಳಕರ್ ಅವರು ಸ್ಕೇಟಿಂಗ್‌ಗೆ ನಿಶಾನೆ ತೋರಿದರು. ಎಲ್‌ಐಸಿ ಶಾಖಾಽಕಾರಿ ಶ್ರೀನಿವಾಸ ಕೋಟ್ಯಾನ್, ದಲಿತ ಸಂಘರ್ಷ ಸಮಿತಿಯ ತುಳಸಿದಾಸ ಪಾವಸ್ಕರ್,ರವೀಂದ್ರ, ಗಾರು ಮಾಂಗ್ರೆ,ಕಿರಣ ಬೋರ್ಕರ್ ಇತರರು ಇದ್ದರು. ನಿವೃತ್ತ ಪೌರ ಕಾರ್ಮಿಕ ನಾರಾಯಣ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net