ಇಂದಿನಿಂದ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಜಾತ್ರೆ

oppo_2
ಮಲೆಮಹದೇಶ್ವರ ಬೆಟ್ಟದಲ್ಲಿ ದಸರಾ ಜಾತ್ರೆಗೆ ಉತ್ಸವ ಮೂರ್ತಿಯ ಉಯ್ಯಲೆ ನಡೆಸಲು ಕಂಠಶಾಲೆಯಲ್ಲಿ ತೊಟ್ಟಿಲು ಅಳವಡಿಸಿರುವುದು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೆ.30 ರಿಂದ ಮಹಾಲಯ ಅಮಾವಾಸ್ಯೆ ಜಾತ್ರೆ ಆರಂಭವಾಗಲಿದ್ದು, ಸೆ.3 ರಿಂದ ದಸರಾ ಜಾತ್ರೆಯು ಶುರುವಾಗಲಿದೆ. ಇದಕ್ಕೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಗತ್ಯ ಸಿದ್ಧತೆ ನಡೆದಿದೆ.

ಸೆ.30ರಂದು ದೇಗುಲದಲ್ಲಿ ಮಾದಪ್ಪನಿಗೆ ವಿಶೇಷ ಪೂಜೆಯನ್ನು ನೆರವೇರಿಸುವುದರ ಮೂಲಕ ಮಹಾಲಯ ಅಮಾವಾಸ್ಯೆ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಅ.1 ರಂದು ಸಂಜೆ 6.30 ರಿಂದ 8.30ರೊಳಗೆ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಹಾಗೂ ವಿವಿಧ ಉತ್ಸವಾದಿಗಳು ನಡೆಯಲಿವೆ. ಅ.2 ರಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸ್ವಾಮಿಗೆ ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿವೆ. ಈ ದಿನ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಅ.3 ರಂದು ಶರನ್ನವರಾತ್ರಿ ಹಿನ್ನೆಲೆಯಲ್ಲಿ ದೇಗುಲದ ಪಶ್ಚಿಮ ದಿಕ್ಕಿನ ಕಂಠಶಾಲೆಯ ಆವರಣದಲ್ಲಿ ಹಸಿರು ಚಪ್ಪರವನ್ನು ಹಾಕಿ ತೂಗುಯ್ಯಲೆಯ ತೊಟ್ಟಿಲು ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ 9 ದಿನಗಳ ಕಾಲ ಪ್ರತಿದಿನ ರಾತ್ರಿ 8.30ಕ್ಕೆ ಮಾದಪ್ಪನ ಪಟ್ಟದ ಉಯ್ಯಲೆಯ ಉತ್ಸವದ ಸೇವೆಯು ಬೇಡಗಂಪಣ ಅರ್ಚಕರಿಂದ ಜರುಗಲಿದ್ದು, ಈಗಾಗಲೇ ತೊಟ್ಟಿಲನ್ನು ಅಳವಡಿಸಲಾಗಿದೆ. ಚಪ್ಪರ ನಿರ್ಮಾಣಕ್ಕೆ ಅಗತ್ಯವಾದ ಬಿದಿರನ್ನು ಸಂಗ್ರಹಿಸಲಾಗಿದೆ. ಇನ್ನು ಅ.11 ರಂದು ಮಹಾನವಮಿ, ಆಯುಧಪೂಜೆಯ ಹಿನ್ನೆಲೆಯಲ್ಲಿ ದೇಗುಲದಲ್ಲಿರುವ ಪಟ್ಟಗಾರ ರಾಯಣ್ಣ ನಾಯಕನು ಯುದ್ಧಕ್ಕೆ ಬಳಸಿದ ಕತ್ತಿ, ಖಡ್ಗ, ಕಠಾರಿ, ಭರ್ಜಿಗಳು ಹಾಗೂ ಪಟ್ಟದ ಕತ್ತಿಗಳನ್ನು ನಂದನವನದ ಮಜ್ಜನ ಬಾವಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅ.12 ರಂದು ವಿಜಯದಶಮಿ ಹಿನ್ನೆಲೆಯಲ್ಲಿ ರಾತ್ರಿ ಪೂಜೆಯ ಬಳಿಕ ಬಿಳಿ ಕುದುರೆ ವಾಹನೋತ್ಸವನ್ನು ನೆರವೇರಿಸುವುದರ ಮೂಲಕ ಜಂಬೂ ಸವಾರಿಯನ್ನು ನಡೆಸಲಾಗುತ್ತದೆ. ಈ ಜಾತ್ರೆಯಲ್ಲೂ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಅಗತ್ಯ ಸಿದ್ಧತೆಯ ಜತೆಗೆ ಭಕ್ತರಿಗೆ ಮೂಲ ಸೌಕರ್ಯವನ್ನು ಒದಗಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ.

ಜಾತ್ರಾ ಸಂಬಂಧ ಪ್ರಾಧಿಕಾರದ ವತಿಯಿಂದ ಬೆಂಗಳೂರು, ಮೈಸೂರು, ರಾಮನಗರ, ಹಾಸನ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರಚಾರ ನಡೆಸಲಾಗಿದೆ. ಶುದ್ಧ ಕುಡಿಯುವ ನೀರಿನ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಅಡುಗೆ (ಪರ) ತಯಾರಿಸುವ ಸ್ಥಳಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ದೇವರ ದರ್ಶನ ಪಡೆಯಲು ತೆರಳುವ ಸರತಿ ಸಾಲು, ರಾಜಗೋಪುರದ ಎಡ ಹಾಗೂ ಬಲ ಭಾಗದಲ್ಲಿ ನೆರಳಿಗಾಗಿ ಶಾಮಿಯಾನ ವ್ಯವಸ್ಥೆ, ಈಗಿರುವ ಶೌಚಗೃಹಗಳ ಜತೆಗೆ 80 ತಾತ್ಕಾಲಿಕ ಶೌಚಗೃಹಗಳ ಅಳವಡಿಕೆ, ನಿರಂತರ ದಾಸೋಹ, ವಾಹನಗಳಿಗೆ ಪಾರ್ಕಿಂಗ್, ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಸೇರಿದಂತೆ ಅಗತ್ಯ ಸೌಕರ್ಯಗಳ ಒದಗಿಸಲು ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಇದರ ಜತೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net