

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಅಧ್ಯಾಪಕನಗರದ ಸದ್ಗುರು ಶ್ರೀ ಸಿದ್ದಪ್ಪಜ್ಜನ ಮಠದಲ್ಲಿ ಹಠಯೋಗಿ ಶ್ರೀ ಸಿದ್ದಪ್ಪಜ್ಜನವರ 165ನೇ ಜಯಂತಿ ಉತ್ಸವ ನಿಮಿತ್ತ ಜಾತ್ರಾ ಮಹೋತ್ಸವವು ಡಿ. 16ರಿಂದ ಐದು ದಿನಗಳ ವರೆಗೆ ಭಕ್ತಿ ಭಾವದಿಂದ ನಡೆಯಲಿದೆ.
ನಿತ್ಯ ಸಂಜೆ 7ಕ್ಕೆ ಶಿವಾನುಭವ ಪ್ರವಚನ ಹಾಗೂ ಧಾಮಿರ್ಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿತ್ಯ ಪ್ರವಚನ ನಡೆಯಲಿದೆ. ವಿವಿಧ ಮಠಾಧೀಶರು ಭಾಗವಹಿಸುವರು.
ಡಿ. 16ರಂದು ಸಂಜೆ 7ಕ್ಕೆ ನಡೆಯುವ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸುವರು. ಭಕ್ತ ಮಂಡಳಿ ಅಧ್ಯಕ್ಷ ಕಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಶಾಂತಾಶ್ರಮದ ಶ್ರೀ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸುವರು.
ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ಸುನಿತಾ ಮಾಳವದಕರ, ಮಾಜಿ ಸದಸ್ಯ ಶಾಂತಪ್ಪ ದೇವಕ್ಕಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ತೆರಿಗೆ ಸಲಹೆಗಾರ ಸಚಿನ್ ಇಕ್ಕಲಮಾರ, ನಿವೃತ್ತ ಶಿಕ್ಷಕ ಎಸ್.ಎಫ್. ಹೆಬಸೂರ, ಇತರರು ಪಾಲ್ಗೊಳ್ಳುವರು.
ವಿರೇಶ್ವರ ಪುಣ್ಯಾಶ್ರಮದ ಸಂಗಮೇಶ ಪಾಟೀಲ ಅವರಿಂದ ಸಂಗೀತ ಸೇವೆ ನಡೆಯಲಿದೆ. ತೋಟೇಂದ್ರ ಕುಮಾರ ತಬಲಾ ಸಾಥ್ ನೀಡುವರು