ಅಮರಗೋಳದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

IMG_20250511_111136_821.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳದಲ್ಲಿ ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ದ್ವಾದಶ ವರ್ಷದ ನಿಮಿತ್ತ ಬೃಹತ್ ಸಿದ್ಧಚಕ್ರ ಆರಾಧನೆ ಹಾಗೂ ನೂತನ ಜಿನಬಿಂಬದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮೇ 18ರಿಂದ ಐದು ದಿನಗಳವರೆಗೆ ಏರ್ಪಡಿಸಲಾಗಿದೆ.

ಭಗವಾನ ಶ್ರೀ 1008 ಶಾಂತಿನಾಥ, ಕುಂಥುನಾಥ, ಅರಹನಾಥ ತೀರ್ಥಂಕರ ಜಿನಬಿಂಬಗಳ ಪ್ರತಿಷ್ಠಾಪನೆ ನಡೆಯಲಿದೆ. ಮೇ 18ರಂದು ಬೆಳಗ್ಗೆ 7ಕ್ಕೆ ಧರ್ಮಧ್ವಜಾರೋಹಣ, 7.30ಕ್ಕೆ ಧರ್ಮಸಭಾ ಮಂಟಪದ ಉದ್ಘಾಟನೆ, ನಂತರ ಧಾರ್ಮಿಕ ವಿಧಿ ವಿಧಾನ ಪೂಜೆಗಳು ನಡೆಯಲಿವೆ. ಮಧ್ಯಾಹ್ನ 2.30ಕ್ಕೆ ಧರ್ಮಸಭೆ ನಡೆಯಲಿದ್ದು, ಆಚಾರ್ಯ ಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರು ಸಾನ್ನಿಧ್ಯ ವಹಿಸುವರು. ಬಾಲಬ್ರಹ್ಮಚಾರಿ ಶ್ರೀ ಸೋಮದೇವ ಭಯ್ಯಾಜಿ ಉಪಸ್ಥಿತರಿರುವರು.

ಅಮರಗೋಳ ಜೈನ ಸಮಾಜ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಶಾಂತಪ್ಪ ದೇವಕ್ಕಿ ಅಧ್ಯಕ್ಷತೆ ವಹಿಸುವರು. ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ಮಂಜುನಾಥ ಬುರ್ಲಿ, ದಿಗಂಬರ ಜೈನ್ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ, ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ ಅತಿಥಿಗಳಾಗಿ ಪಾಲ್ಗೊಳ್ಳುವರು. ದಾನಿಗಳಿಗೆ ಸನ್ಮಾನ ನಡೆಯಲಿದೆ.

ಮೇ 19ರಂದು ಬೆಳಗ್ಗೆ 7ಕ್ಕೆ ಜನ್ಮ ಕಲ್ಯಾಣ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಮಧ್ಯಾಹ್ನ 2.30ಕ್ಕೆ ಧರ್ಮಸಭೆಯ ಸಾನ್ನಿಧ್ಯವನ್ನು ಆಚಾರ್ಯ ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ವಹಿಸುವರು. ಪ್ರಗತಿ ಪರ ರೈತ ಪಾರ್ಶ್ವನಾಥ ದೇವಕ್ಕಿ ಅಧ್ಯಕ್ಷತೆ ವಹಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಎಸ್ ಡಿಎಂ ಕಾಲೇಜಿನ ಪದ್ಮಲತಾ ನಿರಂಜನಕುಮಾರ, ಕಲ್ಲನಗೌಡ್ರ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮೇ 20ರಂದು ದೀಕ್ಷಾ ಕಲ್ಯಾಣ, ಮೇ 21ರಂದು ಕೇವಲಜ್ಞಾನ ಕಲ್ಯಾಣ, ಮೇ 22ರಂದು ಮೋಕ್ಷ ಕಲ್ಯಾಣ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net