

ಹುಬ್ಬಳ್ಳಿ: ತಾಲೂಕಿನ ಅಮರಗೋಳದಲ್ಲಿ ಶ್ರೀಮದ್ ದೇವಾದಿದೇವ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ 5ನೇ ಹಾಗೂ ಕೊನೆಯ ದಿನ ಗುರುವಾರ ಮೋಕ್ಷ ಕಲ್ಯಾಣ ಧಾರ್ಮಿಕ ವಿಧಿ ವಿಧಾನಗಳು ಸಂಭ್ರಮದಿಂದ ನಡೆದವು.
ಆಚಾರ್ಯ ಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ದ್ವಾದಶ ವರ್ಷದ ಬೃಹತ್ ಸಿದ್ಧಚಕ್ರ ಆರಾಧನೆಯ ಹಾಗೂ ನೂತನ ಜನಬಿಂಬದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಿಮಿತ್ತ ಗುರುವಾರ ಬೆಳಗ್ಗೆಯಿಂದ ವೈವಿದ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಸೋಮದೇವ ಭಯ್ಯಾಜಿ ಹಾಗೂ ಪ್ರತಿಷ್ಠಾಚಾರ್ಯರಾದ ಶ್ರೀಮಂದರ ಉಪಾಧ್ಯೆ, ಪಂಡಿತ ವರ್ಗದವರು ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಬೆಳಗ್ಗೆ ಬೃಹತ್ ಸಿದ್ಧ ಚಕ್ರ ವಿಧಿವಿಧಾನಗಳ ಮಾಡಿ, ಆರ್ಗ್ಯಗಳನ್ನು ಸಲ್ಲಿಸಲಾಯಿತು. 1008 ಭಗವಾನ್ ಶಾಂತಿನಾಥ, ಕುಂತುನಾಥ, ಅರಹನಾಥ ತೀರ್ಥಂಕರರಿಗೆ ಸಮಸ್ತ ಶ್ರಾವಕರಿಂದ ಜಲಾಭಿಷೇಕ ಗಂಧಾಭಿಷೇಕ ಮಾಡಲಾಯಿತು.
1008 ಪಾರ್ಶ್ವನಾಥ ತೀರ್ಥಂಕರರಿಗೆ ಮೋಕ್ಷ ಕಲ್ಯಾಣ ಕಾರ್ಯಕ್ರಮ ನೆರವೇರಿಸಲಾಯಿತು.
ಪರ ಊರಿನ ಹಾಗೂ ಅಮರಗೋಳ ಜೈನ ಶ್ರಾವಕರು, ಜೈನ ಸಮಾಜದ ಅಧ್ಯಕ್ಷ ಶಾಂತಪ್ಪ ದೇವಕ್ಕಿ ಅವರಿಗೆ ಸನ್ಮಾನಿಸಲಾಯಿತು. ಸೌಧರ್ಮ ಇಂದ್ರ ಇಂದ್ರಾಣಿ ಹಾಗೂ ಇತರರಿಗೆ ನಮೋಕಾರ ಮಂತ್ರ ಫಲಕ ನೀಡಿ ಗೌರವಿಸಲಾಯಿತು.
ಶಾಂತಿನಾಥ, ಕುಂತುನಾಥ, ಅರಹನಾಥ ತೀರ್ಥಂಕರರ ಮೂರ್ತಿಗಳ ಭವ್ಯ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಆಚಾರ್ಯ 108 ಪುಣ್ಯಸಾಗರ ಮುನಿ ಮಹಾರಾಜರ ಅಮೃತ ಹಸ್ತದಿಂದ ಬಸದಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಮುಖಂಡರಾದ ಧರಣೇಂದ್ರ ದೇವಕ್ಕಿ, ಶಿವಪ್ಪ ಹೊರಕೇರಿ, ಭೀಮಸಿ ದೇವಕ್ಕಿ, ಡಾ. ಎ.ಬಿ. ಖೋತ್, ನೇಮಚಂದ್ರ ದೇವಕ್ಕಿ, ಮಹಾವೀರ ಜೈನ್ ಇತರರು ಇದ್ದರು.