

ಲಿಂಗಸುಗೂರು: ದೇವರಭೂಪುರ ಬೃಹನ್ಮಠದಲ್ಲಿ ಸೋಮವಾರ ಅಮರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಪ್ರಯುಕ್ತ ಭಕ್ತರಿಗೆ ಸಜ್ಜೆ ರೊಟ್ಟಿ ಹಾಗೂ ಪುಂಡಿ ಪಲ್ಯ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮಠದ ಸುತ್ತಮುತ್ತಲ ಗ್ರಾಮಸ್ಥರು ಶ್ರಾವಣದ ಆರಂಭದಿಂದ ಏಳನೇ ಸೋಮವಾರದವರೆಗೆ ನಿತ್ಯ ಶಿವಭಜನೆ ನಡೆಸುತ್ತಾರೆ. ಕೊನೆಯ ದಿನದಂದು ಭಕ್ತರು ಮಠಕ್ಕೆ ಸಜ್ಜೆ ರೊಟ್ಟಿಯೊಂದಿಗೆ ಆಗಮಿಸುತ್ತಾರೆ. ಮಠದಲ್ಲಿ ಪುಂಡಿ ಪಲ್ಯ, ಜೋಳದ ಬಾನ, ಬೆಲ್ಲದ ಸಜ್ಜಕ, ಅನ್ನ, ಸಾಂಬರ್ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಂತರ ಮಠದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಶಿವಭಜನೆ ನಡೆಸಿ ಪ್ರಸಾದ ಸೇವನೆ ಮಾಡಲಾಗುತ್ತದೆ.
ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರಾವಣ ಮಾಸದ ಪ್ರತಿ ಸೋಮವಾರ ಅಮರೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ, ಸಂಜೆ ಭಜನೆ ಕಾರ್ಯಕ್ರಮ ನಡೆಯುತ್ತದೆ. ಐದನೇ ಸೋಮವಾರ ಗುಂತಗೋಳ ಕಳಸದ ಗುಡಿಯಲ್ಲಿ, ಆರನೇ ಸೋಮವಾರ ಗುರುಗುಂಟಾದ ಕಳಸದ ಗುಡಿಯಲ್ಲಿ, ಏಳನೇ ಸೋಮವಾರ ದೇವರಭೂಪುರ ಕಳಸದ ಗುಡಿಯಲ್ಲಿ ಅಮರೇಶ್ವರ ಉತ್ಸವ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ನೆರವೇರಿದ ಬಳಿಕ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣೆಗೆ ನಡೆಸಿದ ಬಳಿಕ ಬೃಹನ್ಮಠದಲ್ಲಿ ಪ್ರತಿಷ್ಠಾಪಿಸಿ ಶಿವಭಜನೆ ಸೇವೆ ನಡೆಸಲಾಯಿತು.
ಪ್ರಮುಖರಾದ ಸಿದ್ದಯ್ಯಸ್ವಾಮಿ ಬ್ಯಾಳಿಮಠ, ಮಂಜುನಾಥ ಹೂಗಾರ, ಬಸವರಾಜ ಯರಡೋಣ, ಮಲ್ಲಣ್ಣ ವಾರದ, ಮಹೇಶ ನಂದಿಕೋಲಮಠ, ನಾಘಪ್ಪ ಬೋರಾವತ್, ಅರ್ಚಕ ಗಂಗಾಧರಯ್ಯ, ಅಮರೇಶ ತಿಳಿ, ಡಾ.ಮಹಾಂತೇಶ, ಬಸಯ್ಯಸ್ವಾಮಿ ಗುಂತಗೋಳ, ಅಮರೇಶ ಕಳಸದಗುಡಿ, ಗಜದಂಡಯ್ಯ ಜಾಲಿಬೆಂಚಿ, ಈರಣ್ಣ ಅರಳಿ, ಗುಡದಯ್ಯಸ್ವಾಮಿ, ಪರ್ವತಯ್ಯ ತಿಳಿ, ಅಮರೇಗೌಡ ಇತರರಿದ್ದರು.