

ರಾಯಚೂರು: ಜಂಬಣ್ಣ ಅಮರಚಿಂತರ ಕಾವ್ಯ ಶೋಷಿತರಿಗೆ ಬೆಳಕಾಗಿತ್ತು. ಶೋಷಿಸುವ ಮತ್ತು ಶೋಷಣೆಗೆ ಈಡಾಗುವ ಎರಡು ಮುಖಗಳನ್ನು ಮುಖಾಮುಖಿಯಾಗಿಸಿ ಕಾವ್ಯ ಹೆಣೆಯುವ ಮನಸ್ಸು ಅಮರಚಿಂತರದ್ದಾಗಿತ್ತು ಎಂದು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಸಂಜೆ ಅಮರಚಿಂತ ಲಕ್ಷ್ಮಯ್ಯ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮರಚಿಂತರು ಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು.
ಬಂಡಾಯ ಮತ್ತು ದಲಿತ ಚಳುವಳಿ ಸಂದರ್ಭದಲ್ಲಿ ಹಸಿದವರ ಹಾಗೂ ಶೋಷಿತರ ಸ್ಥಿತಿಗತಿಯನ್ನು ತಮ್ಮ ಕಾವ್ಯದ ಮೂಲಕ ಕಟ್ಟಿಕೊಟ್ಟ ಅಮರಚಿಂತರು ಕಥೆ, ಕಾವ್ಯ ಮತ್ತು ಗಜಲ್ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಜನಪದ ಸಾಹಿತ್ಯ ಬದುಕಿನ ಸಾಹಿತ್ಯವಾಗಿದ್ದು, ಎಲ್ಲ ಸಾಹಿತ್ಯ ತಾಯಿ ಬೇರಾಗಿದೆ. ಅಮರಚಿಂತರು ಜನರ ಬದುಕಿನ ಜೀವನದ ಅನುಭವಗಳನ್ನು ಕಂಡುಕೊಂಡು ಅದನ್ನು ಕಾವ್ಯ ರೂಪಕ್ಕೆ ಇಳಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಅಮರಚಿಂತರು ಭೌತಿಕವಾದ ಮತ್ತು ಭಾವನವಾದಗಳನ್ನು ಬೆರೆಸಿ ಹೊಸ ನುಡಿಗಟ್ಟನ್ನು ನೀಡಿದ್ದಾರೆ. ಜನರಲ್ಲಿ ವೈಚಾರಿಕೆ ಬೆಳಕನ್ನು ಮೂಡಿಸಿದ ಅಮರಚಿಂತರು ಬಂಡಾಯದ ಕೆಂಡ, ಸ್ವಭಾವದಲ್ಲಿ ತಂಗಾಳಿಯಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ದಸ್ತಗೀರಸಾಬ್ ದಿನ್ನಿ, ಭಗತರಾಜ್ ನಿಜಾಮಕಾರಿ, ಆಂಜಿನೇಯ ಜಾಲಿಬೆಂಚಿ, ದತ್ತಿ ದಾನಿಗಳಾದ ರಾಮಲಿಂಗಮ್ಮ ಅಮರಚಿಂತ, ರಾಜಶೇಖರ ಅಮರಚಿಂತ, ಕಸಾಪ ಪದಾಕಾರಿಗಳಾದ ರಾವುತರಾವ್ ಬರೂರ, ಡಾ.ವಿಜಯರಾಜೇಂದ್ರ, ದೇವೇಂದ್ರಮ್ಮ ಉಪಸ್ಥಿತರಿದ್ದರು.