

ಮುದ್ದೇಬಿಹಾಳ: ದಂತಕಥೆಯಾಗಿರುವ ಅಮರಶಿಲ್ಪಿ ಜಕಣಾಚಾರ್ಯರು ಕರ್ನಾಟಕದ ಶಿಲ್ಪಕಲೆಗೆ ವಿಶೇಷ ಕೊಡುಗೆ ನೀಡಿ ಕರ್ನಾಟಕವನ್ನು ವಿಶ್ವದಲ್ಲೇ ಹೆಸರುವಾಸಿಯಾಗಿಸಿದ್ದಾರೆ. ಆ ಕೀರ್ತಿಯನ್ನು ವಿಶ್ವಕರ್ಮ ಸಮಾಜದವರು ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಶ್ರೀಗುರು ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ತಾಲೂಕು ವಿಶ್ವಕರ್ಮ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬೇಲೂರು, ಹಳೇಬೀಡಿನಲ್ಲಿ ನಿರ್ಮಿಸಿರುವ ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಮಾದರಿಯ ದೇವಾಲಯಗಳು ಇವರ ಶಿಲ್ಪಕಲಾ ಕೌಶಲಕ್ಕೆ ಸಾಕ್ಷಿಯಾಗಿವೆ. ಅವರನ್ನು ಪ್ರತಿನಿಧಿಸುವ ವಿಶ್ವಕರ್ಮ ಸಮಾಜ ಇಂದಿಗೂ ಕಲೆಯಲ್ಲಿ ಶ್ರೇಷ್ಠತೆ ಮೆರೆಯುವಂಥವರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕರ್ಮ ಸಮ್ಮಾನ್ ಯೋಜನೆ ಜಾರಿಗೊಳಿಸಿ ಈ ಸಮುದಾಯಕ್ಕೆ ನೆರವಾಗಿದ್ದಾರೆ. ಜಕಣಾರ್ಯರಂಥ ಶ್ರೇಷ್ಠ ವ್ಯಕ್ತಿಯನ್ನು ಹೊಂದಿರುವ ಈ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇರುವುದು ಚಿಂತಿಸುವಂಥದ್ದು. ವೈಮನಸ್ಯ, ಅಸಹನೆ ಬದಿಗಿಟ್ಟು ಅನ್ಯವಿಚಾರಗಳಿಗೆ ಆಸ್ಪದ ಕೊಡದೆ ಎಲ್ಲರೂ ಒಂದಾಗಿ ಸಮಾಜದ ಗೌರವ ಮತ್ತು ಜಕಣಾಚಾರ್ಯರ ಅಮರತ್ವ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮುರನಾಳದ ಜಗನ್ನಾಥ ಸ್ವಾಮೀಜಿ ಅವರು ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನ ಮಹತ್ವ ಎಂಥದ್ದು ಅನ್ನುವುದನ್ನು ತಿಳಿಸಿ ಜಕಣಾಚಾರ್ಯರು ಸಾಧಿಸಿದ ಶ್ರೇಷ್ಠತೆಯನ್ನು ನಮ್ಮ ಕಲೆಯ ಕೌಶಲದ ಮೂಲಕ ಎತ್ತರಕ್ಕೆ ಕೊಂಡೊಯ್ಯಲು ಪರಸ್ಪರ ಬಾಂಧವ್ಯ, ಹೊಂದಾಣಿಕೆ, ಸಮನ್ವಯತೆ ಇರಬೇಕು ಎಂದರು.
ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಲಕ್ಷ್ಮೀಪುರ ಮಾತನಾಡಿದರು. ಎಂಜಿವಿಸಿ ಕಾಲೇಜಿನ ಉಪನ್ಯಾಸಕ ಪ್ರೊ.ವಿ.ಎಸ್.ಲಮಾಣಿ ಅವರು ಜಕಣಾಚಾರ್ಯರ ಜೀವನ, ಸಾಧನೆ ಕುರಿತು ಉಪನ್ಯಾಸ ನೀಡಿದರು.
ಆನೇಗುಂದಿ ಸಂಸ್ಥಾನ ಸರಸ್ವತಿ ಪೀಠದ ನಾಗಮೂರ್ತೇಂದ್ರರು, ನಾಲತವಾಡದ ಪಂಪಾಪತಿ ಸ್ವಾಮೀಜಿ, ವಿಜಯಪುರ-ದೇವರಹಿಪ್ಪರಗಿಯ ದೇವೇಂದ್ರ ಸ್ವಾಮೀಜಿ, ಸಾಸನೂರನ ಶ್ರೀಶೈಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಹಿರಿಯರಾದ ಪ್ರಭಾಕರ ಪತ್ತಾರ ಬಾವೂರ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಪಾಧ್ಯಕ್ಷ ಪ್ರಮೋದ ಬಡಿಗೇರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಮಾಟಲದಿನ್ನಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಸುಗೂರಿನ ಕಾಳಪ್ಪ ಬಡಿಗೇರ ಇತರರಿದ್ದರು. ಬಸವರಾಜ ಬಡಿಗೇರ ಹಡಗಲಿ ಸ್ವಾಗತಿಸಿದರು. ಬಸವರಾಜ ಬಡಿಗೇರ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಟಿ.ಡಿ.ಲಮಾಣಿ ನಿರೂಪಿಸಿ, ವಂದಿಸಿದರು.