ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ

udp-1-yashpal
Published on

ಉಡುಪಿ: ಅಮರಶಿಲ್ಪಿ ಜಕಣಾಚಾರಿ ತಮ್ಮ ಕೈಚಳಕದ ಮೂಲಕ ಕೆತ್ತನೆ ಮಾಡಿದ ಶಿಲ್ಪ ಕಲಾಕೃತಿಗಳು ಇಂದು ಇಡೀ ವಿಶ್ವದ ಪ್ರವಾಸಿಗರ ಗಮನ ಸೆಳೆಯುತ್ತಿದೆ. ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ, ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ವಿಶ್ವಕರ್ಮ ಸಮುದಾಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ 14 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಸಮುದಾಯದ ಮುಖಂಡರು ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಈ ಭಾಗದ ಶಿಲ್ಪಕಲಾಕೃತಿಗಳ ಕೆತ್ತನೆ ಕುರಿತು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಈ ವೃತ್ತಿಯನ್ನು ಮುಂದಿನ ಪೀಳಿಗೆಯವರು ಮುಂದುವರೆಸಿಕೊಂಡು ಹೋಗಲು ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ವಿಶ್ವದಲ್ಲಿ ಭಾರತವನ್ನು ಶಿಲ್ಪಕಲೆಗಳ ತವರೂರು ಎಂದು ಗುರುತಿಸಲು ಶಿಲ್ಪಿಗಳೇ ಕಾರಣೀಕರ್ತರು. ಶಿಲ್ಪಕಲೆಯ ಮೂರ್ತಿಯಲ್ಲಿ ಶಿಲ್ಪಿಯ ಹೆಸರನ್ನು ನಮೂದಿಸುವುದರಿಂದ ಮುಂದಿನ ಜನಾಂಗದವರು ಸುಲಭವಾಗಿ ಗುರುತಿಸಲು ಸಾಧ್ಯ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ವಿಶ್ವಕರ್ಮ ಎಜ್ಯುಕೇಶನಲ್​ ಟ್ರಸ್ಟ್​ ಅಧ್ಯಕ್ಷ ಪ್ರೊ.ಬಿ.ಎ ಆಚಾರ್ಯ, ದೇಶದ ಸೌಂದರ್ಯ ಮತ್ತು ಸಂಪತ್ತಿಗೆ ಶಿಲ್ಪಕಲೆಯೇ ಕಾರಣೀಭೂತವಾಗಿದೆ. ವಿಶ್ವಕರ್ಮರು ಕರ್ನಾಟಕದ ಬೇಲೂರು, ಹಳೆಬೀಡು, ಹಂಪಿ, ಪಟ್ಟದಕಲ್ಲು, ಶ್ರವಣಬೆಳಗೊಳದಲ್ಲಿ ನಿರ್ಮಿಸಿದ ಬೃಹತ್​ ಶಿಲ್ಪಗಳು ಜಗತ್ತಿನ ಎಲ್ಲಾ ಭಾಗಗಳ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಶಿಲ್ಪಿಗಳ ಪ್ರತಿನಿಧಿ ಜಕಣಾಚಾರ್ಯ. 12ನೇ ಶತಮಾನದಲ್ಲಿ ಅವರು ಮಾಡಿದ ಸಾಧನೆ ಜನರ ಮನದಲ್ಲಿ ಚಿರಸ್ಥಾಯಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಲಾಶಿಲ್ಪಿ ರಾಮಚಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಉಪ ಕಾರ್ಯದರ್ಶಿ ರಾಜು ಮೊಗವೀರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ವಿಶ್ವಕರ್ಮ ಒಕ್ಕೂಟದ ಉಡುಪಿ ಹಾಗೂ ದ.ಕನ್ನಡ ಜಿಲ್ಲಾಧ್ಯಕ್ಷ ಮಧು ಆಚಾರ್ಯ ಮುಲ್ಕಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ, ಕುಂಜಿಬೆಟ್ಟು ಇದರ ಅಧ್ಯಕ್ಷ ಕೆ. ವೆಂಕಟೇಶ್​ ಆಚಾರ್ಯ, ಅಖಿಲ ಭಾರತ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್​ ಆಚಾರ್ಯ ನೇರಂಬಳ್ಳಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಸಂ ಇಲಾಖೆಯ ಸಹಾಯಕಿ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಮಹೇಶ್​ ಮಲ್ಪೆ ನಿರೂಪಿಸಿದರೆ, ಹರೀಶ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net