ಅಮರಶಿಲ್ಪಿ ಜಕಣಾಚಾರಿ ಹೆಸರು ಅಜರಾಮರ: ಶಾಸಕ ಕೆ.ಹರೀಶ್‌ಗೌಡ ಬಣ್ಣನೆ

13
Published on

ಮೈಸೂರು: ನಾಡಿನ ಹೆಮ್ಮೆಯ ವಾಸ್ತುಶಿಲ್ಪಿ ಜಕಣಾಚಾರಿ ಅವರ ಹೆಸರು ನಮ್ಮ ಪೀಳಿಗೆಗೆ ಮಾತ್ರವಲ್ಲದೆ, ಸೂರ್ಯ-ಚಂದ್ರ ಇರುವವರೆಗೂ ಅಮರ ಎಂದು ಶಾಸಕ ಕೆ.ಹರೀಶ್‌ಗೌಡ ಬಣ್ಣಿಸಿದರು.
ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಕಣಾಚಾರಿ ವಾಸ್ತುಶಿಲ್ಪದಲ್ಲಿ ನಾಡಿನಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ನಿರ್ಮಿಸುವುದರ ಜತೆಗೆ, ಪ್ರಮುಖ ರಸ್ತೆಗೆ ಅವರ ಹೆಸರಿಡುವ ಕೆಲಸ ಆಗಬೇಕು. ಇದರಿಂದ ಮುಂದಿನ ಪೀಳಿಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಯಾವುದೇ ಒಳ್ಳೆಯ ಕಾರ್ಯಕ್ಕೆ ಸಮುದಾಯದವರು ಒಗ್ಗಟಾಗಿ ನಮ್ಮೊಟ್ಟಿಗೆ ಕೈ ಜೋಡಿಸಬೇಕು. ಮೈಸೂರಿನಾದ್ಯಂತ ವಿಶ್ವಕರ್ಮ ಸಮುದಾಯದ 75 ರಿಂದ 80 ಸಾವಿರ ಜನರಿದ್ದಾರೆ. ಆದರೆ ನಿಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಆದ್ದರಿಂದಲೇ ಸಮುದಾಯಕ್ಕೆ ಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತೀದ್ದಿರಿ ಎಂದರು.
ಸಮಾಜದ ಎಲ್ಲ ತಳವರ್ಗದವರಿಗೂ ಮುಖ್ಯಮಂತ್ರಿ ಸೌಲಭ್ಯಗಳನ್ನು ರೂಪಿಸುತ್ತಾರೆ. ಆದರೆ ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಬೇಕಾದರೆ ಒಗ್ಗಟ್ಟಾಗಿ ಇರುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರು ಇಲ್ಲದಿದ್ದರೆ ಸಮಾಜದಲ್ಲಿ ನಿಮ್ಮ ಸಮುದಾಯದ ಗುರುತಿಸುವಿಕೆ ಸಾಧ್ಯವಾಗುತ್ತಿರಲಿಲ್ಲ. ಜಕಣಾಚಾರಿಯವರ ಸಾಧನೆ, ಪ್ರತಿಭೆ, ಶಿಲ್ಪ ವೈಶಿಷ್ಟ್ಯ ತಿಳಿಯಲು ಈ ಕಾರ್ಯಕ್ರಮ ಬಹಳ ಉಪಯೋಗಕಾರಿಯಾಗಿದೆ ಎಂದರು.
ಮುಂದಿನ ಪೀಳಿಗೆಗೂ ಇದರ ಬಗ್ಗೆ ತಿಳಿಯಬೇಕು. ಎಲ್ಲರೂ ತಮಗೆ ಇಚ್ಛಿಸಿದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ನಾವು ಬೆಳೆಯಬೇಕೆಂದರೆ ಸರ್ಕಾರದ ಜತೆಗೆ ಎಲ್ಲ ಸಮಾಜದ ಜನರು ಒಗ್ಗಟ್ಟಿನಲ್ಲಿರಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್ ಮಾತನಾಡಿ, ಸಾಹಿತ್ಯಕ್ಕೆ ಕುವೆಂಪು, ಶಿಲ್ಪಕಲೆಗೆ ಜಕಣಾಚಾರಿ ಮೆರುಗು. ವಿದ್ಯಾರ್ಥಿಗಳು ಹಾಗೂ ಪಾಲಕರು ವಾಸ್ತುಶಿಲ್ಪದ ಅಧ್ಯಯನ ಮಾಡಲು ಮನಸ್ಸು ಮಾಡಬೇಕು. ಈ ಕಲೆಯನ್ನು ಎತ್ತರಕ್ಕೆ ಬೆಳೆಸಿ, ಮುಂದಿನ ತಲೆಮಾರುಗಳು ತಿಳಿದುಕೊಳ್ಳುವಂತೆ ಮಾಡಬೇಕು. ಶಿಲ್ಪಕಲೆ ಎಂಬುದು ಎಲ್ಲರಿಗೂ ಬರುವಂಥದ್ದಲ್ಲ. ಇದಕ್ಕೆ ಅದರದ್ದೇ ಆದಂತಹ ತಪಸ್ಸು, ಶ್ರದ್ಧೆ ಇರಬೇಕು. ಆಗ ಮಾತ್ರವೇ ಶಿಲ್ಪಕಲೆ ಒಲಿಯುತ್ತದೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಉಪನ್ಯಾಸಕ ಟಿ.ಕೆ.ಕೆಂಪೇಗೌಡ ಮಾತನಾಡಿ, ನಾಡಿನಲ್ಲಿ ಶತಮಾನದಿಂದಲೂ ಹಲವಾರು ಸಂಗೀತಗಾರರು, ಸಂತರು, ಆಚಾರ್ಯರ ಕೊಡುಗೆಗಳು ದಾಖಲಾಗಿವೆ. ಜಗತ್ತಿನ ನಮ್ಮ ತಲೆಮಾರುಗಳು, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ತಿಳಿಸಿಕೊಡಬೇಕು. ಇಲ್ಲವಾದರೆ ನಾವು ನಮ್ಮ ಜ್ಞಾನದ ಅಸ್ತಿತ್ವ ಕಳೆದುಕೊಳ್ಳುತ್ತೇವೆ ಎಂದು ಹೇಳಿದರು.
ಇಂದಿನ ಯುವಕರಿಗೆ ಸೃಜನಾತ್ಮಕ ಸಂವಾದದ ಅಗತ್ಯವಿದೆ. ಸತ್ಯಂ ಶಿವಂ ಸುಂದರಂ ಎಂಬ ಜಪ ಮಾಡಿಕೊಂಡು ಒಂದು ಸಂಸ್ಕೃತಿಯನ್ನೇ ಸೃಷ್ಟಿಸಿ ಎಲ್ಲ ಕವಿ, ಕಲೆಗಾರರು ಹಾಗೂ ಶಿಲ್ಪಿಗಳಿಗೆ ಜಕಣಾಚಾರಿಯವರು ಸ್ಫೂರ್ತಿಯಾಗಿದ್ದಾರೆ ಎಂದರು.
ಕೊಪ್ಪಳ ಜಿಲ್ಲೆ ಆನೆಗೊಂದಿ ಹೊಸಹಳ್ಳಿಯ ಮೇತಸ್ವಿ ಸರಸ್ವತಿ ಅಮ್ಮನವರ ಪೀಠದ ಶ್ರೀಗಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮೈಸೂರು ನಗರಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಜಿ. ಎಸ್.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net