

ಮಂಡ್ಯ: ಶಿಲೆಗಳ ಮೇಲೆ ಕೆತ್ತನೆಯ ಮೂಲಕ ಸಂಸ್ಕ್ರತಿ ಮತ್ತು ಇತಿಹಾಸವನ್ನ ಜೀವಂತವಾಗಿಟ್ಟಿರುವ ಅಮರ ಶಿಲ್ಪಿ ಜಕಣಾಚಾರಿ ಅವರ ಸಾಧನೆ ಹಾಗೂ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನ ಸಂಸ್ಕ್ರತಿ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಕಲ್ಲು-ಶಿಲೆಯ ಮೇಲೆ ಕೆತ್ತನೆಯಾಗಿದೆ. ಮಾತ್ರವಲ್ಲದೆ ನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸಿಸುತ್ತದೆ. ಸಾಧನೆಗೆ ಸಾವಿಲ್ಲ, ಈ ನಿಟ್ಟಿನಲ್ಲಿ ಜಕಣಾಚಾರಿ ಅವರು ಕೊಟ್ಟಿರುವಂತವ ಕೊಡುಗೆ ಸೂರ್ಯ ಮತ್ತು ಚಂದ್ರ ಇರುವವರೆಗೂ ಜೀವಂತವಾಗಿರುತ್ತದೆ ಎಂದರು.
ನಾವೆಲ್ಲರೂ ಕೂಡ ಜಕಣಾಚಾರಿಯವರ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಮಕ್ಕಳಿಗೂ ತಿಳಿಸಬೇಕು. ಸಾಹಿತ್ಯ, ಕಲೆ, ಸಂಸ್ಕ್ರತಿ, ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು. ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಕೇವಲ ಅವರನ್ನು ನೆನಪಿಸಿಕೊಳ್ಳದೆ ಅವರಿಗೆ ನಮಿಸಬೇಕು. ಪುಸ್ತಕ ನೋಡಿ ಜಕಣಾಚಾರಿಯವರ ಸಾಧನೆಯನ್ನು ತಿಳಿದುಕೊಳ್ಳುವುದಕ್ಕಿಂತ, ಅವರ ಸಾಧನೆ ಹಾಗೂ ಕೊಡುಗೆಗಳನ್ನು ಕಣ್ಣಾರೆ ನೋಡಿದರೆ ನಮಗೆ ಹೆಮ್ಮೆ ಉಂಟಾಗುತ್ತದೆ ಎಂದರು.
ಬೇಲೂರು ಮತ್ತು ಹಳೆಬೀಡು ವಿಶ್ವಪರಂಪರೆ ಸಾಧನೆಯ ಪಟ್ಟಿಯಲ್ಲಿದೆ. ಇದಕ್ಕೆ ಕಾರಣ ಶಿಲೆಗಳ ಮೇಲಿರುವ ಇತಿಹಾಸ. ಅವುಗಳನ್ನು ಒಮ್ಮೆಯಾದರು ನೋಡಬೇಕು. ಜೀವವಿಲ್ಲದ ಕಲ್ಲಿಗೆ ಜೀವವನ್ನು ತುಂಬಿ ಕೊಡುವ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ಜಕಣಾಚಾರಿ ಅವರಂತಹ ಮಹಾನ್ ಕಲೆಗಾರರನ್ನು ಅಂತರಂಗದಲ್ಲಿ ಪೂಜಿಸಿ, ಗೌರವಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ, ವಿಶ್ವಕರ್ಮ ಸಮಾಜದ ವೇದಬ್ರಹ್ಮ ಕೇಶವಮೂರ್ತಿ, ಮುಖಂಡರಾದ ವೈ.ಡಿ.ಶ್ರೀನಿವಾಸಮೂರ್ತಿ, ಎಚ್.ಪಿ.ಸತೀಶ್, ನಾಗರಾಜ ಆಚಾರ್, ಎಲ್.ಆನಂದ, ಸುದರ್ಶನ್, ಎಂ.ಬಿ.ರಮೇಶ್, ದೇವರಾಜು ಇತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವಿಶ್ವಕರ್ಮ ಸಮಾಜದವರನ್ನು ಅಭಿನಂದಿಸಲಾಯಿತು.