ಅಮರ ಮಧುರ ಪ್ರೇಮ ಪ್ರದರ್ಶನ 20ರಂದು

15 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗುರು ಇನ್​ಸ್ಟಿಟ್ಯೂಟ್​ ವತಿಯಿಂದ ಸಿದ್ಧಪಡಿಸಿರುವ "ಅಮರ ಮಧುರ ಪ್ರೇಮ' ಹೊಸ ನಾಟಕದ ಪ್ರದರ್ಶನವನ್ನು ಏ. 20ರಂದು ನಗರದ ಸೃಜನಾ ರಂಗ ಮಂದಿರದಲ್ಲಿ ಸಂಜೆ 6.45ಕ್ಕೆ ಏರ್ಪಡಿಸಲಾಗಿದೆ ಎಂದು ರಂಗ ನಿರ್ದೇಶಕ ಡಾ. ಯಶವಂತ ಸರದೇಶಪಾಂಡೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕರ ಸುತ್ತ ಹೆಣೆದ ಈ ನಾಟಕವು ನುರಿತ ಕಲಾವಿದರಿಂದ ಪ್ರದರ್ಶಿಸಲಾಗುತ್ತಿದೆ. ಮರಾಠಿ ಪ್ರಸಿದ್ಧ ನಾಟಕಕಾರ ಹೇಮಂತ ಎದಲಬಾದಕರ್​ ರಚಿಸಿರುವ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಲಾಗಿದೆ. ವಯೋವೃದ್ಧರ ವಿವಾಹ ಪ್ರಸಂಗ, ಸಂಭ್ರಮದ ಸಂಭಾಷಣೆಯ ಹಾಸ್ಯ ನಾಟಕದಲ್ಲಿ ಕನ್ನಡ ಟೆಲಿವಿಷನ್​ ಲೋಕದ ಜನಪ್ರಿಯ ಜೋಡಿ ವೀಣಾ ಸುಂದರ ಮತ್ತು ಸುಂದರ ಅಭಿನಯಿಸಿದ್ದಾರೆ ಎಂದರು.

ಹುಬ್ಬಳ್ಳಿಯ ಗಂಗಾವತಿ ಸಿಲ್ಕ್​ ಪ್ಯಾಲೇಸ್​ ಆಯೋಜನೆಯ ಗಂಗಾವತಿ ರೇಷ್ಮೆ ರಂಗೋತ್ಸವದ ಭಾಗವಾಗಿ ಮತ್ತು ಜೋಶಿಸ್​ ಆಸ್ಟ್ರೊಸ್ಕೋಪ್​ ಸಹಯೋಗದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರವಿಣ ಡಿ. ರಾವ್​ ಸಂಗೀತ, ಜೀವನ್​ ಫರ್ನಾಂಡಿಸ್​, ಪ್ರದೀಪ ಮುಧೋಳ ರಂಗಸಜ್ಜಿಕೆ ಹಾಗೂ ನಾಗರಾಜ ಪಾಟೀಲ ಬೆಳಕು ವಿನ್ಯಾಸ ನಿರ್ವಹಿಸಲಿದ್ದಾರೆ ಎಂದರು.

ನಟಿ ವೀಣಾ ಸುಂದರ ಮಾತನಾಡಿ, ಈಗಾಗಲೇ ಚಲನಚಿತ್ರ, ಧಾರವಾಹಿಗಳಲ್ಲಿ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದೇವೆ. ಆದರೆ ರಂಗಭೂಮಿ ನೀಡುವ ಖುಷಿ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಡಾ. ಯಶವಂತ ಅವರ ನಿರ್ದೇಶನದಲ್ಲಿನ ನಾಟಕದಲ್ಲಿ ನಟಿಸುವುದು ಖುಷಿ ವಿಚಾರವಾಗಿದೆ. ಇದೊಂದು ಹೊಸ ಅನುಭವ ನೀಡಲಿದೆ ಎಂದರು.

ಸುಂದರ, ಡಾ. ಪವನ ಜೋಶಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net