ಕೊಡಗು ಕೆಡಿಪಿ ಸಭೆಯಲ್ಲಿ ಎ.ಮಂಜು

27mdk04
Published on

ಮಡಿಕೇರಿ:

ತನ್ನ ಪುತ್ರ ಡಾ. ಮಂತರ್ ಗೌಡ ಶಾಸಕರಾಗಿರುವ ಕೊಡಗಿನ ಕೆಡಿಪಿ ಸಭೆಯಲ್ಲಿ ಅರಕಲಗೂಡು ಶಾಸಕ ಎ. ಮಂಜು ಪಾಲ್ಗೊಂಡು ಗಮನ ಸೆಳೆದರು. ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮಂಜು, ತಮ್ಮ ಪುತ್ರ ಶಾಸಕ ಡಾ.ಮಂತರ್ ಗೌಡ ಅವರು ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ ತಾವು ಕೆಡಿಪಿ ಸಭೆಯಲ್ಲಿ ಭಾಗವಹಿಸಿಲ್ಲ. ಎಸ್‌ಎಲ್‌ಡಿಬಿ ಬ್ಯಾಂಕ್ ಹಾಸನ ಮತ್ತು ಕೊಡಗು ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದರು.

ಅವನು ಕೊಡಗಿನಿಂದ ಎಂಎಲ್‌ಎ, ನಾನು ಅರಕಲಗೂಡಿನಿಂದ ಎಂಎಲ್‌ಎ.. ನೋಡೋಕೆ ಸಂತೋಷ ಆಗಲ್ವಾ ಎಂದು ಪ್ರಶ್ನಿಸಿದ ಎ. ಮಂಜು ಇಲ್ಲಿ ಅಪ್ಪ, ಮಗನ ಪ್ರಶ್ನೆ ಅಲ್ಲ, ಜನ ಮತ್ತು ಅಭಿವೃದ್ಧಿಯ ಚಿಂತನೆ ಮುಖ್ಯ. ತಾವು ಶಾಸಕರಾಗಿ ಕೊಡಗಿನ ಆಗುಹೋಗುಗಳ ಬಗ್ಗೆ ಕೇಳುವ ಅಧಿಕಾರ ತನಗೆ ಇದೆ ಎಂದರು.

ಬಿಜೆಪಿ ಸರ್ಕಾರ ಏನೆಂದು ಜನರಿಗೆ ಐದು ವರ್ಷಗಳ ಬಳಿಕ ಗೊತ್ತಾಯಿತು. ಕಾಂಗ್ರೆಸ್ ಸರ್ಕಾರ ಏನೆಂದು ಒಂದು ತಿಂಗಳಲ್ಲಿ ಜನರಿಗೆ ಗೊತ್ತಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಾವು ಮಾತಾಡಲು ಹೋಗಲ್ಲ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿ. ಆದರೆ ರಾಜ್ಯದ ಜನರನ್ನು ಅಭಿವೃದ್ಧಿ ವಂಚಿತರನ್ನಾಗಿ ಮಾಡಬೇಡಿ. ಆಹಾರ ಭದ್ರತೆಯಡಿ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಐದು ಕೆ.ಜಿ. ಅಕ್ಕಿಯನ್ನು ನೀಡುತ್ತದೆ. ಉಚಿತ ಅಕ್ಕಿ ನೀಡುವ ಬಗ್ಗೆ ಈಗ ಕೇಂದ್ರ ಸರ್ಕಾರದ ಪಾಲೇನು, ರಾಜ್ಯ ಸರ್ಕಾರದ ಪಾಲೇನು ಎನ್ನುವುದೂ ಜನರಿಗೆ ಗೊತ್ತಾಗುತ್ತಿದೆ. ಉಚಿತ ಯೋಜನೆಗಳ ಹಿನ್ನೆಲೆಯಲ್ಲಿ ಈ ವರ್ಷ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವುದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net