

ಆಲೂರು : ಭಾರತೀಯ ಸಂಪ್ರದಾಯದಂತೆ ಹಿಂದೂಗಳು ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಆದರೆ ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ ವ್ರತಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕರೆಯುವುದುಂಟು ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖೆಯ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಭೀಮನ ಅಮಾವಾಸ್ಯೆಯ ಪ್ರಯುಕ್ತ ಆಯೋಜಿಸಿದ್ದ ಮಾಸಿಕ ಜ್ಞಾನ ವೈಭವಂ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಭೀಮನ ಅಮಾವಾಸ್ಯೆಯನ್ನು ಮದುವೆಯಾದ ಹೆಂಗಸರು ಮಾತ್ರವಲ್ಲ, ಮದುವೆಯಾಗದ ಹೆಣ್ಣುಮಕ್ಕಳು ಕೂಡ ಆಚರಿಸಬಹುದು. ಮದುವೆಯಾಗದ ಹೆಣ್ಣುಮಕ್ಕಳು ಒಳ್ಳೆ ಗಂಡ ಸಿಗಲಿ ಎಂದು ಹಾಗೂ ಮದುವೆಯಾದ ಹೆಣ್ಣು ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ದೇವರನ್ನು ಪ್ರಾರ್ಥಿಸಿ ಈ ವ್ರತ ಕೈಗೊಳ್ಳುತ್ತಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀಮಠದ ಆವರಣದಲ್ಲಿರುವ ದೇವರುಗಳ ಸಾನಿಧ್ಯದಲ್ಲಿ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ವಕೀಲ ಮಹೇಶ್ ಮುರುಡೂರು, ತಾಲೂಕು ವೀರಶೈವ ಸಂಘದ ಶಿವಮೂರ್ತಿ, ಡಾ.ಜಯರಾಜ್, ಮುಖಂಡರಾದ ಯಶ್ವಂಶ್, ಹಾಲಪ್ಪ, ತೆಗರೆ ರೇವಪ್ಪ, ಬಸವರಾಜು, ಸಮರ್ಥ್ ಇತರರು ಇದ್ದರು.