ದೈಹಿಕ, ಮಾನಸಿಕ ವ್ಯಾಯಾಮದಿಂದ ಹಿರಿಯರಿಗೆ ನಿರಾಳತೆ; ಆಲ್‌ಝೈಮರ್ ದಿನಾಚರಣೆಯಲ್ಲಿ ಡಾ.ಶ್ರೀಪತಿ ರಾವ್ ಪ್ರತಿಪಾದನೆ
ಮಂಗಳೂರು ಪುರಭವನದಲ್ಲಿ ಶುಕ್ರವಾರ ಜರುಗಿದ ಆಲ್‌ಝೈಮರ್ ದಿನಾಚರಣೆ ಕಾರ್ಯಕ್ರಮದಲ್ಲಿ ಯೇನೆಪೋಯ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಬಿ.ಎಚ್.ಶ್ರೀಪತಿ ರಾವ್, ಆಪ್ತ ಸಮಾಲೋಚಕಿ ಡಾ.ರಮೀಳಾ ಶೇಖರ್, ಪೇಜ್ ಮಂಗಳೂರು ಅಧ್ಯಕ್ಷ ಡಾ.ರಘುವೀರ್, ಹಿರಿಯ ವೈದ್ಯಾಧಿಕಾರಿ ಡಾ.ಪ್ರಭಾ, ಡಾ.ಕೇಶವ ಪೈ, ಲೊರೆಟ್ಟಾ ಪಿಂಟೊ, ಜೆರಾರ್ಡಿನ್ ಡಿಸೋಜ, ಡಾ.ಅನಿಲ್ ಕಾಕುಂಜೆ ಮುಂತಾದವರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಮಂಗಳೂರು ಹಿರಿಯರು ದೈಹಿಕ ಹಾಗೂ ಮಾನಸಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕಿನುದ್ದಕ್ಕೂ ಆರೋಗ್ಯಕರ ಜೀವನ ನಡೆಸುವುದು ಸಾಧ್ಯ ಎಂದು ಯೇನೆಪೋಯ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಬಿ.ಎಚ್.ಶ್ರೀಪತಿ ರಾವ್ ಹೇಳಿದರು. ಸಮಾನ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಪೇಜ್ ಮಂಗಳೂರು ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ ಆಲ್‌ಝೈಮರ್ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ವಯೋಸಹಜ ಮರೆಗುಳಿತನ, ಮನೋನಿಯಂತ್ರಣ ಸಮಸ್ಯೆಗಳಿಗೆ ಕುಟುಂಬ ವ್ಯವಸ್ಥೆಯಲ್ಲಿ ಉಂಟಾಗಿರುವ ಕೆಲವು ಬದಲಾವಣೆಗಳೇ ಮುಖ್ಯ ಕಾರಣ. ಉತ್ತಮ ಶಿಕ್ಷಣ ಪಡೆದ ಮಕ್ಕಳು ಹೆಚ್ಚಿನವರು ಒಳ್ಳೆಯ ಉದ್ಯೋಗ ಪಡೆದು ದೂರದ ಊರು, ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. ದೊಡ್ಡ ಸಂಖ್ಯೆಯ ಹಿರಿಯರು ಬಂಗಲೆಯಂತಹ ಮನೆಗಳಲ್ಲಿ ಏಕಾಂಗಿಯಾಗಿದ್ದಾರೆ. ಇಂತಹ ಪರಿಸ್ಥಿತಿಯು ಹಿರಿಯರ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹಿರಿಯರು ತಮ್ಮದೇ ಸಂಘಟನೆಗಳ ಮೂಲಕ ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪೇಜ್ ನಂತಹ ಸಂಸ್ಥೆಗಳು ನೆರವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದರು.
ಕುಟುಂಬ ವ್ಯವಸ್ಥೆ ಬಲವರ್ಧನೆ ಆಪ್ತ ಸಮಾಲೋಚಕಿ ಡಾ.ರಮೀಳಾ ಶೇಖರ್ ಅವರು ಮಾತನಾಡಿ, ಕುಟುಂಬ ವ್ಯವಸ್ಥೆಯನ್ನು ಒಳ್ಳೆಯ ರೀತಿಯಲ್ಲಿ ಕಾಪಾಡುವುದರಿಂದ ಹಿರಿಯರ ಸಮಸ್ಯೆ ಕಡಿಮೆಯಾಗುವುದು. ಈ ನಿಟ್ಟಿನಲ್ಲಿ ಕುಟುಂಬದಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯವಿದೆ ಎಂದರು. ಅಧಿಕ ಸಂಖ್ಯೆಯಲ್ಲಿ ಹಿರಿಯ ನಾಗರಿಕರನ್ನು ಹೊಂದಿರುವ ಮಂಗಳೂರು ನಗರದಲ್ಲಿ ವರ್ಷಂಪ್ರತಿ ಕನಿಷ್ಠ 1,000 ದಿಂದ 2,000 ದಷ್ಟು ಹೊಸ ಜನರು ಆಲ್‌ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪ್ರಸ್ತಾವನೆಗೈದ ಹಿರಿಯ ವೈದ್ಯಾಧಿಕಾರಿ ಡಾ.ಪ್ರಭಾ ಅಧಿಕಾರಿ ಹೇಳಿದರು. 50 ವರ್ಷ ದಾಟಿದ ಬಹಳಷ್ಟು ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಪ್ರಕರಣಗಳು ಇವೆ ಮತ್ತು ಕೋವಿಡ್ -19 ನಂತರ ಈ ಪ್ರಮಾಣ ಹೆಚ್ಚಾಗಿದೆ. ವಾಯು ಮಾಲಿನ್ಯ. ಮಿದುಳಿನ ಗಾಯ ಮುಂತಾದ ಪ್ರಕರಣಗಳಿಂದ ಕೂಡ ಆಲ್‌ಝೈಮರ್, ಬುದ್ದಮಾಂದ್ಯತೆ ಸಮಸ್ಯೆಗಳನ್ನು ಹಿರಿಯರು ಅನುಭವಿಸುತ್ತಿದ್ದಾರೆ ಎಂದರು.
ಸಹಾಯವಾಣಿ ಬಳಸಿ ಮುಖಂಡ ಮೋಹನ್‌ರಾಜ್ ಅವರು ಮಾತನಾಡಿ, ಇತರ ವಯೋಮಾನದವರಿಗೆ ಹೋಲಿಸಿದರೆ ಹಿರಿಯ ನಾಗರಿಕರ ಕುರಿತು ಕುಟುಂಬದ ನಿರ್ಲಕ್ಷೃ ಅತಿಯಾಗಿದೆ. ಹಿರಿಯ ನಾಗರಿಕರು ತಮ್ಮ ಯಾವುದೇ ಸಮಸ್ಯೆಗಳ ಕುರಿತು 24ಗಿ7 ಸಹಾಯವಾಣಿಗೆ (910 8919025) ಕರೆ ಮಾಡಿ ಸಾಂತ್ವಾನ, ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಮೆಮೊರಿ ಪರೀಕ್ಷೆ, ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮತ್ತು ಶ್ರವಣ ಪರೀಕ್ಷೆ ಸೌಲಭ್ಯ ಒದಗಿಸಲಾಯಿತು. ಪೇಜ್ ಮಂಗಳೂರು ಅಧ್ಯಕ್ಷ ಡಾ.ರಘುವೀರ್ ಅಧ್ಯಕ್ಷತೆ ವಹಿಸಿದರು. ಕೆಎಂಸಿ ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೇಶವ ಪೈ, ಸುಶೆಗ್ ಟ್ರಸ್ಟ್ ಎಂಡಿ ಲೊರೆಟ್ಟಾ ಪಿಂಟೊ, ಎಂಎಎ ಸ್ಥಾಪಕ ಜೆರಾರ್ಡಿನ್ ಡಿಸೋಜ, ಯೇನೆಪೋಯ ಮನೋವೈದ್ಯ ಶಾಸ್ತ್ರ ವಿಭಾಗದ ಡಾ.ಅನಿಲ್ ಕಾಕುಂಜೆ ಉಪಸ್ಥಿತರಿದ್ದರು.