

ಹಳಿಯಾಳ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬೆಂಬಲ ನೀಡುತ್ತೇವೆ. ಸುಖಾಸುಮ್ಮನೆ ಅಥವಾ ಕಾರಣವಿಲ್ಲದೆ ಯಾವ ಅಧಿಕಾರಿಯನ್ನೂ ವರ್ಗಾವಣೆ ಮಾಡುವುದಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ನೂತನ ಬೊಲೆರೋ ವಾಹನವನ್ನು ಶುಕ್ರವಾರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಪೊಲೀಸ್ ಠಾಣೆಗೆ ವಾಹನದ ಅವಶ್ಯಕತೆ ಇತ್ತು. ಎಸ್‌ಪಿ ನಾರಾಯಣ ಅವರ ವಿನಂತಿ ಮೇರೆಗೆ ನೀಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಒಂದು ವೇಳೆ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿದರೆ ಆಯಾ ಕ್ಷೇತ್ರದ ಠಾಣಾಧಿಕಾರಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಅಧಿಕಾರಿಗಳು ತಮಗೆ ಯಾವ ಸ್ಥಳಕ್ಕೆ ವರ್ಗಾವಣೆ ಬೇಕು ಎಂದು ತಿಳಿಸಿದರೆ ಖುದ್ದಾಗಿ ವರ್ಗಾವಣೆ ಮಾಡಿಸುತ್ತೇನೆ ಎಂದರು.
ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಜೈಪಾಲ್ ಪಾಟೀಲ, ಪಿಎಸ್‌ಐಗಳಾದ ವಿನೋದ್ ಎಸ್.ಕೆ., ಕೃಷ್ಣಾ ಅರಕೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ್, ಸುಭಾಷ ಕೊರ್ವೆಕರ ಇತರರಿದ್ದರು.