ಪ್ರಾಣ ತ್ಯಾಗ ಮಾಡಿದವರನ್ನು ಸದಾ ಸ್ಮರಿಸಿ

30 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
‘ಮಂದಿರ ವಹಿ ಬನಾಯೆಂಗೆ’ ಎಂಬ ಧ್ಯೇಯವನ್ನು ಎಲ್ಲ ರಾಮ ಭಕ್ತರು ಸಾಕಾರಗೊಳಿಸಿದ್ದಾರೆ. ಈ ಧ್ಯೇಯಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು ಸದಾ ಸ್ಮರಿಸಬೇಕು ಎಂದು ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಆದರ್ಶ ಬಾಲಿಕಾ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ರಾಮ ಮಂತ್ರಾಕ್ಷತೆ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರೃ ಸಿಕ್ಕ ಸಮಯದಲ್ಲೇ ರಾಮ ಮಂದಿರ ನಿರ್ಮಾಣವಾಗಿದ್ದರೆ ಬಹಳ ಉತ್ತಮವಾಗುತ್ತಿತ್ತು. ನ್ಯಾಯಾಲಯಕ್ಕೆ ಹೋಗುವ ಪ್ರಸಂಗವೇ ಬರುತ್ತಿರಲಿಲ್ಲ. ಭಾರತ ಇಂದು ವಿಶ್ವದಲ್ಲಿ ಉಚ್ಚ್ರಾಯ ಸ್ಥಾನದಲ್ಲಿದೆ. ಇಂದು ಭಾರತ ಹೇಳಿದರೆ ಇಡೀ ಜಗತ್ತು ಕೇಳುತ್ತಿದೆ. ಇಂತಹ ಅಮೃತ ಕಾಲದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಅದನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮದಾಗಿದೆ ಎಂದರು.
ಪ್ರಾಂತ ಪ್ರಚಾರಕ ಚ.ರಾ. ನರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮ ಮಂದಿರ ಅಭಿಯಾನ ಗ್ರಾಮ ಗ್ರಾಮಗಳನ್ನು, ಭಾರತೀಯರನ್ನು ಒಂದುಗೂಡಿಸಿದೆ. 25 ಕೋಟಿ ಪರಿವಾರಗಳನ್ನು ಸಂಪರ್ಕಿಸಿ ರಾಮನ ಮಂತ್ರಾಕ್ಷತೆ ನೀಡಿ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಇದು ಸುವರ್ಣಾಕ್ಷರದಲ್ಲಿ ಬರೆಯುವ ದಾಖಲೆಯಾಗಲಿದೆ ಎಂದರು.
ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಗರಗ ಮಡಿವಾಳೇಶ್ವರ ಮಠದ ಶ್ರೀ ಪ್ರಶಾಂತ ದೇವರು, ಸುಳ್ಳದ ಶ್ರೀ ಶಿವಸಿದ್ಧ ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬ್ಯಾಹಟ್ಟಿಯ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಡಾ. ಎಸ್. ಆರ್. ರಾಮನಗೌಡರ, ಆರ್‌ಎಸ್‌ಎಸ್ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ, ಜಿಲ್ಲಾ ಸಂಘಚಾಲಕ ಡಾ. ವ್ಯಾಸರಾಜ ದೇಶಪಾಂಡೆ, ಜಿಲ್ಲಾ ಕಾರ್ಯವಾಹ ಕಲ್ಲನಗೌಡ ಪಾಟೀಲ, ಬಸವರಾಜ ಕೌಜಲಗಿ, ನರಸಪ್ಪ ಭಟ್ಟಂಗಿ, ಇತರರು ಇದ್ದರು.
ಇದಕ್ಕೂ ಪೂರ್ವದಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ನಗರದ ಲೈನ್ ಬಜಾರನ ಶ್ರೀರಾಮ ದೇವಸ್ಥಾನದಿಂದ ಆದರ್ಶ ಬಾಲಿಕಾ ಪ್ರೌಢಶಾಲೆವರೆಗೆ ಮೆರವಣಿಗೆ ಸಾಗಿತು. ಮಾತೆಯರು ಪೂರ್ಣ ಕುಂಭ ಹೊತ್ತು, ಕಲಾವಿದರು ಡೊಳ್ಳು ವಾದನ ಹಾಗೂ ಹಿಂದು ಕಾರ್ಯಕರ್ತರು ರಾಮನ ಜಯ ಘೋಷಣೆ ಮೂಲಕ ಮೆರವಣೆಗೆಯಲ್ಲಿ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net