ರೋಟರಿ ಸಂಸ್ಥೆಯಿಂದ ಸದಾ ಪರಿಸರ ಕಾಳಜಿ: ರೋಟರಿಯನ್ ವಿಕ್ರಮದತ್ತ

8
Published on

ಮೈಸೂರು: ರೋಟರಿಯ 7 ಪ್ರಮುಖ ಗುರಿಗಳಲ್ಲಿ ಪರಿಸರ ಮತ್ತು ವಿದ್ಯೆಗೆ ಮಹತ್ವ ನೀಡಲಾಗಿದೆ. ರೋಟರಿ ಸಂಸ್ಥೆ ಪರಿಸರದ ಬಗ್ಗೆ ಸದಾ ಕಾಳಜಿ ಹೊಂದಿದ್ದು ಉತ್ತಮ ಸೇವೆ ಮಾಡುತ್ತಿದೆ ಎಂದು ರೋಟರಿ ಇಂಟರ್‌ನ್ಯಾಷನಲ್ 3181ರ ಜಿಲ್ಲಾ ಪ್ರಾಂತಪಾಲ ರೋಟರಿಯನ್ ವಿಕ್ರಮದತ್ತ ಹೇಳಿದರು.
ಮೈಸೂರಿನ ರೋಟರಿ ಕ್ಲಬ್ ಸಂಸ್ಥೆಗಳ ವಲಯ-8 ಮತ್ತು ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ನಿಂದ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಟರಿ ಸಂಸ್ಥೆ ನಾನಾ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಜತೆಗೆ ಪರಿಸರ ಸಂರಕ್ಷಣೆ ಕಾರ್ಯದಲ್ಲಿಯೂ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಈ ಸೇವಾ ಕಾರ್ಯ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಮೈಸೂರಿನಲ್ಲಿ ಪ್ರಾರಂಭವಾಗಿರುವ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣ ಹಚ್ಚ ಹಸಿರಾಗಿಸುವ ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ 1000 ಸಸಿಗಳನ್ನು ನೆಡುವ ಈ ವಿನೂತನ ಕಾರ್ಯಕ್ರಮ ಮಾಡಲಾಗುತ್ತಿದೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉತ್ತಮ ಉದ್ದೇಶ ಇದಾಗಿದೆ ಎಂದರು.
ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ ಮಾತನಾಡಿ, ಕೇವಲ ಅರಣ್ಯ ಇಲಾಖೆ ಸಸಿ ನೆಟ್ಟರೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಅದಕ್ಕಾಗಿ ರೋಟರಿಯಂತಹ ಎಲ್ಲ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೋರಿದರು.
ಅರಣ್ಯ ಇಲಾಖೆಯಿಂದ ಈ ವರ್ಷ 3 ಲಕ್ಷ 30 ಸಾವಿರ ಸಸಿಗಳನ್ನೂ ರೈತರು, ಸಾರ್ವಜನಿಕರಿಗೆ ಒಂದು ಸಸಿಗೆ 3 ರೂ.ನಿಂದ 6 ರೂ.ವರೆಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ. ಈ ವರ್ಷ ಅರಣ್ಯ ಇಲಾಖೆಯಿಂದಲೂ ಒಂದು ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜಗೌಡ ಮಾತನಾಡಿ, ಪರಿಸರದ ಬಗ್ಗೆ ಜಾಗೃತಿ ಇಂದಿನ ತುರ್ತು ಅಗತ್ಯವಾಗಿದೆ. ಶುದ್ಧ ಗಾಳಿ, ಜಾಗತಿಕ ಹವಾಮಾನ, ತಾಪಮಾನವನ್ನು ಸುಸ್ಥಿತಿಯಲ್ಲಿಡಲು ಸಸಿಗಳನ್ನು ನೆಡುವುದರ ಜತೆಗೆ ಏಳೆಂಟು ವರ್ಷ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಪರಿಸರ ಉಳಿಸುವ ಕಾರ್ಯದಿಂದ ಮನುಷ್ಯರ ಜತೆ ಪ್ರಾಣಿ-ಪಕ್ಷಿಗಳಿಗೂ ಹಣ್ಣು ಸಿಗುತ್ತವೆ. ಹಾಗಾಗಿ ಪರಿಸರಕ್ಕೆ ಪೂರಕವಾದ ಸಸಿಗಳನ್ನೂ ನೆಟ್ಟು ಬೆಳೆಸಬೇಕು. ಮನೆಗಳಲ್ಲಿ ನಡೆಯುವ ಶುಭಕಾರ್ಯ, ಹುಟ್ಟುಹಬ್ಬ, ಮದುವೆ, ಗಣ್ಯರ ಬೇಟಿ ಇಂತಹ ಸಂದರ್ಭಗಳಲ್ಲಿ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಬೆಳೆಸಬೇಕು. ನಮ್ಮ ಕೆಬಿಎಲ್ ಸಿದ್ಧಿ ವಿನಾಯಕ ಟ್ರಸ್ಟ್, ರೋಟರಿ ಮೈಸೂರು ಸೌತ್‌ಈಸ್ಟ್‌ನಿಂದ ಹೆಬ್ಬಾಳು ಬಳಿ ನಾಲ್ಕು ಎಕರೆ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯ ನಡೆದಿದ್ದು, ಸಾಲುಮರದ ತಿಮ್ಮಕ್ಕ ಅವರಿಂದ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು ಎಂದು ಹೇಳಿದರು.
ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಎಲ್.ರವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗಿಡ-ಮರಗಳ ಪರಿಚಯ ಚಿಕ್ಕ ವಯಸ್ಸಿನಿಂದ ಆದರೆ ಸಮಾಜಕ್ಕೂ ಒಳ್ಳೆಯದು. ನಮ್ಮ ಶಾಲೆಯು ಮೊದಲಿನಿಂದಲೂ ಹಸಿರು ಪರಿಸರದ ಕ್ಯಾಂಪಸ್ ಹೊಂದಿದ್ದು, ಕ್ರೀಡಾ ಚಟುವಚಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದರು.
ಸಹಾಯಕ ಗರ್ವನರ್ ಎಂ. ರಾಜೀವ್, ರೋಟರಿಯನ್ ಕೇಶವಪ್ರಕಾಶ್, ವಲಯ ಸೇನಾನಿ ಎಂ.ಮೋಹನ್, ಸಂಸ್ಥೆಯ ಕೆ.ಎನ್. ಸಂತೋಷ್, ಎನ್.ಕಿರಣ್, ಎಂ.ಎಸ್. ಉಮಶಂಕರ್ ಆರಾಧ್ಯ, ಮುರಳೀಧರ್, ಗೋವರ್ಧನ್ ಯಾದವ್, ಪ್ರಭಾಕರ್, ವೈಲ್ಡ್ ಲೈಫ್ ಪೊಟೊಗ್ರಾಫರ್ ದಿನೇಶ್ ಬಸವಪಟ್ಟಣ, ದಿಲೀಪ್ ಆರಾಧ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net