ತಳ ಸಮುದಾಯದ ಅಭಿವೃದ್ಧಿಗೆ ಸದಾ ಬದ್ಧ

15 yelandur 01
ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಸವಿತ ಸಮಾಜದಲ್ಲಿ ಅತಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಸನ್ಮಾನಿಸಿದರು.
Published on

ಯಳಂದೂರು: ತಳ ಸಮುದಾಯಗಳ ಅಭಿವೃದ್ಧಿಗೆ ನಾನು ಎಂದೆಂದಿಗೂ ಬದ್ಧನಾಗಿದ್ದು, ಅಗತ್ಯ ನೆರವು ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪ್ಪಣ್ಣ 12ನೇ ಶತಮಾನದ ಮಹಾನ್ ಶರಣರು. 250ಕ್ಕೂ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಸಮಾಜವನ್ನು ತಿದ್ದುವ ಅನೇಕ ಅಂಶಗಳಿದ್ದು ಇವರ ಪತ್ನಿ ಲಿಂಗಮ್ಮ ಕೂಡ ವಚನಗಾರ್ತಿಯಾಗಿದ್ದರು ಎನ್ನುವುದು ವಿಶೇಷ. ಇವರ ತತ್ವಾದರ್ಶ ನಮಗೆ ಆದರ್ಶವಾಗಬೇಕು ಎಂದರು.

ಪಟ್ಟಣದಲ್ಲಿ ಸವಿತಾ ಸಮಾಜದ ಸಮುದಾಯ ಭವನ ಅಪೂರ್ಣವಾಗಿದೆ. ಇದಕ್ಕೆ ಇನ್ನು 27 ಲಕ್ಷ ರೂ. ಬೇಕೆಂದು ಬೇಡಿಕೆ ಇಟ್ಟಿದ್ದರು. ಈಗ 10 ಲಕ್ಷ ರೂ. ನೀಡಿದ್ದು ಮುಂದಿನ ದಿನಗಳಲ್ಲಿ ನನ್ನ ಅನುದಾನದಲ್ಲಿ ಹಣ ನೀಡಿ ಇದನ್ನು ಪೂರ್ಣಗೊಳಿಸಿ ಮುಂದಿನ ವರ್ಷ ಉದ್ಘಾಟಿಸಲಾಗುವುದು ಎಂದರು.

ಮುಖ್ಯ ಭಾಷಣಕಾರ ಗುಂಬಳ್ಳಿ ಬಸವರಾಜು ಮಾತನಾಡಿ, ಹಡಪದ ಅಪ್ಪಣ್ಣ ಬಸವಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಮಿತ ಭಾಷಿಯಾಗಿದ್ದ ಇವರು ಅತ್ಯಂತ ಪ್ರಾಮಾಣಿಕ ಕಾಯಕನಿಷ್ಠೆಯುಳ್ಳ ವಚನಕಾರರಾಗಿದ್ದರು. ಬಂಡಾಯದ ನೆಲೆಯಲ್ಲಿ ಗುರುತಿಸಿಕೊಂಡ ಇವರು ಸಾಮಾಜಿಕ ಸಮಾನತೆ ಸಾರಿದ ಮಹಾನ್ ಸಾಧಕರು. ಅನುಭವ ಮಂಟಪದ ಮುಖ್ಯಸಚೇತಕರಾಗಿ ಇವರ ಸೇವೆ ಗಣನೀಯವಾಗಿದ್ದು ಇವರ ತತ್ವಾದರ್ಶ ನಮಗೆ ಮಾದರಿಯಾಗಿವೆ ಎಂದರು.

ವಿವಿಧ ಬೇಡಿಕೆಯ ಮನವಿ: ನಮ್ಮ ಸಮುದಾಯ ಭವನಕ್ಕೆ ಶಾಸಕರು ಅನುದಾನ ನೀಡಿದ್ದು, ಇದು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಇದರೊಂದಿಗೆ ನಮಗೆ ಸಂಗೀತ ಶಾಲೆ, ಬ್ಯೂಟಿಷಿಯನ್ ತರಬೇತಿ ನೀಡಲು ಸ್ಥಳಾವಕಾಶ ನೀಡಬೇಕು. ಬಿಳಿಗಿರಿರಂಗನಬೆಟ್ಟದ ಮುಡಿಕಟ್ಟೆಯಲ್ಲಿ ನಮ್ಮ ತಾಲೂಕಿನ ಸವಿತ ಬಂಧುಗಳಿಗೆ ಅವಕಾಶ ನೀಡಬೇಕು. ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಬೇಕು. ಶವಸಂಸ್ಕಾರಕ್ಕಾಗಿ ಪ್ರತ್ಯೇಕ ಜಾಗವನ್ನು ನೀಡಬೇಕು. ಪ್ರತ್ಯೇಕ ವಿದ್ಯಾರ್ಥಿವೇತನ ನೀಡಬೇಕು. ಸವಿತಾ ಅಭಿವೃದ್ಧಿ ನಿಗಮದ ವತಿಯಿಂದ ಕ್ಷೌರಿಕ ಕಿಟ್‌ಗಳನ್ನು ವಿತರಣೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸವಿತಾ ಸಮಾಜದವರು ಶಾಸಕರಿಗೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ನಾಮನಿರ್ದೇಶಿತ ಸದಸ್ಯರಾದ ಮುನವ್ವರ್ ಬೇಗ್, ಲಿಂಗರಾಜಮೂರ್ತಿ , ಶ್ರೀಕಂಠ, ತಹಸೀಲ್ದಾರ್ ಎಸ್.ಎಲ್.ನಯನ, ಬಿಇಒ ಎಂ. ಮಾರಯ್ಯ, ಸಿಪಿಐ ಕೆ.ಶ್ರೀಕಾಂತ್, ಪಿ.ವೀರಭದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net