ರಾಷ್ಟ್ರ ರಕ್ಷಣೆಗೆ ಸದಾ ಸಿದ್ಧರಾಗಿರಿ

26 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರ ರಕ್ಷಣೆಗಾಗಿ ಗಡಿಗಳಲ್ಲಿ ನಿಂತು ಸದಾಕಾಲ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ಮನೋಬಲ ಹೆಚ್ಚಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕು ಎಂದು ಮಾಜಿ ಸೈನಿಕ, ಕೆಯುಐಡಿಎಫ್​ಸಿ ಕಾರ್ಯ ನಿರ್ವಾಹಕ ನಿರ್ದೇಶಕ ಮೇಜರ್​ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾರ್ಗಿಲ್ ​ ಸ್ತೂಪ ಬಳಿ ಕಾರ್ಗಿಲ್ ಸ್ಮಾರಕ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಇರಬೇಕು. ಸೈನಿಕರ ತ್ಯಾಗ, ಬಲಿದಾನ ನಮಗೆಲ್ಲ ಪ್ರೇರಣೆ. ನಮ್ಮ ಮಕ್ಕಳನ್ನೂ ಸೈನಿಕರನ್ನಾಗಿ ಮಾಡಲು ಪಣ ತೊಡಬೇಕು. ಕಾರ್ಗಿಲ್ ಯುದ್ಧದ ಹುತಾತ್ಮ ಸೈನಿಕರ ನೆನಪಿಗಾಗಿ ಸೈನಿಕರಲ್ಲದವರು ಸ್ತೂಪ ನಿರ್ಮಿಸಿ ಅದರ ನಿರ್ವಹಣೆ ಮಾಡುತ್ತಿರುವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಮೇಯರ್​ ರಾಮಣ್ಣ ಬಡಿಗೇರ ಮಾತನಾಡಿ, ಸೈನಿಕರಂತೆ ನಾವು ಗಡಿಯಲ್ಲಿ ಯುದ್ಧ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ಇದ್ದ ಸ್ಥಳದಿಂದಲೇ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕು. ಸೈನಿಕರ ಟೀಕೆ ಮಾಡುವವರ ವಿರುದ್ಧ ಸಜ್ಜನರೆಲ್ಲ ಮೌನವಾಗಿರದೆ ಧ್ವನಿ ಎತ್ತಿ ಸೈನಿಕರಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ನಂತರ ಗಣ್ಯರು ಹೂ ಗುಚ್ಛ ಸರ್ಮಪಿಸಿ ಹುತಾತ್ಮರಿಗೆ ನಮನ ಸಲ್ಲಿಸಿದರು. ಡಾ. ರಾಮು ಮೂಲಗಿ ಹಾಗೂ ಮಾಯಾರಾಮನ್​ ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಮಾಜಿ ಸೈನಿಕರಾದ ಸಿಕಂದರ ಐ.ಕೆ, ರಾಜಶೇಖರ ರಬ್ಬಾನಿ, ಬಿ.ಎಚ್​. ಜಾಧವ, ಬಿ.ಎಲ್​. ಚಂದ್ರಶೇಖರ, ಮಂಜುನಾಥ ಬಿ.ಎಲ್​., ನ್ಯಾಯಾಧೀಶ ಪರಶುರಾಮ ದೊಡಮನಿ, ಮಾಜಿ ಸಂಸದ ಐ.ಜಿ. ಸನದಿ, ಮಹೇಂದ್ರ ಸಿಂಘಿ, ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್​. ಪಾಟೀಲ, ಪಾಲಿಕೆ ಸದಸ್ಯರಾದ ಸುರೇಶ ಬೇದರೆ, ಜ್ಯೋತಿ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ ಸನದಿ, ಸದಾನಂದ ಡಂಗನವರ, ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಸದಸ್ಯರಾದ ಆನಂದ ಕುಲಕರ್ಣಿ, ರಮೇಶ ನಾಡಿಗೇರ, ಮಲ್ಲಿಕಾರ್ಜುನ ಚಿಕ್ಕಮಠ, ವಸಂತ ಅರ್ಕಾಚಾರ, ಶ್ರೀಶೈಲ ಕರಿಕಟ್ಟಿ, ಪಂಡಿತ ಮುಂಜಿ, ಶಿವಯೋಗಿ ಅಮಿನಗಡ, ಉದಯ ಯಂಡಿಗೇರಿ, ಎಸ್​.ಬಿ. ಗುತ್ತಲ, ಶರಣಪ್ಪ ಕೊಟಗಿ, ಡಾ. ಎಸ್​.ಆರ್​. ರಾಮನಗೌಡರ, ವಿಶ್ವೇಶ್ವರಿ ಹಿರೇಮಠ, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net