9ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ

H.P. SWAROOP
Published on

ಹಾಸನ: ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ವಿರಾಸತ್ ಹಾಗೂ ಹಾಸನ ಘಟಕ ಮತ್ತು ಹಲವು ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಫೆ.9ರಂದು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ತಿಳಿಸಿದರು.

ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಜ.9ರ ಸಂಜೆ 5.45ಕ್ಕೆ ಉತ್ಸವ ಆರಂಭವಾಗಲಿದ್ದು, ಆಳ್ವಾಸ್‌ನ 350 ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮ ನೀಡಲಿದ್ದಾರೆ. ಶಾಸ್ತ್ರೀಯ ನೃತ್ಯ-ಭೋ ಶಂಭೋ, ಆಂಧ್ರದ ಜನಪದ ಬಂಜಾರ ನೃತ್ಯ, ಬಡಗತ್ತಿಟ್ಟು ಯಕ್ಷಗಾನ-ಶ್ರೀರಾಮ ಪಟ್ಟಾಭಿಷೇಕ, ಮಣಿಪುರ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ-ನವದುರ್ಗೆಯರು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ-ವರ್ಷಧಾರೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಬಡಗುತ್ತಿಟ್ಟು ಯಕ್ಷಗಾನ-ರಾಸಲೀಲೆ, ಪುರುಲಿಯಾ, ವಂದೇ ಮಾತರಂ ಮೊದಲಾದ ವಿಶೇಷ, ವಿಭಿನ್ನವಾದ ನೃತ್ಯಗಳು ಜರುಗಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಳ್ವಾಸ್ ನುಡಿಸಿರಿ, ಹಲವಾರು ಸಂಘ-ಸಂಸ್ಥೆ, ಹಿರಿಯ ನಾಗರಿಕರ ವೇದಿಕೆ ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಇದೇ ರೀತಿ ಜಿಲ್ಲೆಯ ಹಲವು ಕಡೆ ಸಾಂಸ್ಕೃತಿಕ ಉತ್ಸವ ನಡೆಯುತ್ತಿದೆ. ಕನ್ನಡ ಭಾಷೆ, ಪರಂಪರೆ ಮಹತ್ವ, ಹಿರಿಮೆ ಸಾರುವ ಈ ಕಾರ್ಯಕ್ರಮ ಈಗಾಗಲೇ ಹಲವು ವಿದೇಶಗಳಲ್ಲೂ ಪ್ರದರ್ಶನಗೊಂಡು ಜನಮನ ಗೆದ್ದಿದೆ. ಹಾಸನದಲ್ಲಿ ದೊಡ್ಡಮಟ್ಟದ ಮನರಂಜನೆ ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕರವೇ, ರೆಡ್‌ಕ್ರಾಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿವಿ, ಮೊದಲಾದ ಸಂಸ್ಥೆಗಳು ಸೇರಿ ಉತ್ಸವ ಯಶಸ್ಸಿಗೊಳಿಸಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಜನರು, ರೈತರು ತಮ್ಮ ಮಕ್ಕಳನ್ನು ಕಳಿಸಿಕೊಡಬೇಕು. ಅಗತ್ಯಬಿದ್ದರೆ ಬಸ್ ವ್ಯವಸ್ಥೆಯನ್ನೂ ಮಾಡಲಾಗುವುದು. ಎಲ್ಲರೂ ಕಾರ್ಯಕ್ರಮ ನೋಡಬೇಕು ಎಂಬುದು ನಮ್ಮ ಆಶಯ. ಹಾಗೆಯೇ ನಿಂತು ಹೋಗಿರುವ ಹೊಯ್ಸಳೋತ್ಸವವನ್ನು ಮತ್ತೆ ಆರಂಭಿಸುವ ಬಗ್ಗೆ ಡಿಸಿ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಕಲಾಭವನದ ಹೆಚ್ಚಿನ ಅಭಿವೃದ್ಧಿಗೆ 2 ಕೋಟಿ ರೂ. ನೆರವು ಕೇಳಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಟರ್ಫ್ ಮೈದಾನ ನಿರ್ಮಾಣಕ್ಕೂ ಹಣಕಾಸಿನ ನೆರವು ಕೇಳಲಾಗಿದೆ. ಕೇಂದ್ರ ಬಜೆಟ್ ನಮಗೆ ತೃಪ್ತಿ ನೀಡಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸುವ ಬಗ್ಗೆ ಚರ್ಚೆ ಮಾಡೋಣ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದರು.

ನಗರ ವ್ಯಾಪ್ತಿಯಲ್ಲಿ ಪಾರ್ಕ್ ಅಭಿವೃದ್ಧಿ, ಸತ್ಯಮಂಗಲ ಬಡಾವಣೆಗೆ ಹೇಮಾವತಿ ನೀರು ಕೊಡುವ ಕಾಮಗಾರಿ ನಡೆಯುತ್ತಿದೆ. ನಗರಸಭೆಯಿಂದ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಒಳ ಚರಂಡಿ ಇತ್ಯಾದಿ ಕಾಮಗಾರಿ ಕೈಗೊಳ್ಳಲು ಇಂದಿನಿಂದಲೇ ಟೆಂಡರ್ ಕರೆಯುವ ಪ್ರಕ್ರಿಯೆ ಶುರುವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಮುಖಂಡ ಸಾಲಗಾಮೆ ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net