

ನರಸಿಂಹ ನಾಯಕ್ ಬೈಂದೂರು
ಬೈಂದೂರು ತಾಲೂಕಿನ ಸರ್ವಋತು ಬಂದರಿಗೆ ಅವಕಾಶವಿರುವ ಕರಾವಳಿ ಪ್ರಮುಖ ಮೀನುಗಾರಿಕಾ ಬಂದರಲ್ಲಿ ಒಂದಾದ ಶಿರೂರು ಗ್ರಾಮದ ಅಳ್ವೆಗದ್ದೆ ಬಂದರು ಪ್ರಸ್ತುತ ಮೇಲ್ದರ್ಜೆಗೇರುವ ನಿರೀಕ್ಷೆಯಲ್ಲಿದೆ.
ದೇಶದ ಪ್ರಮುಖ ಬಂದರನ್ನು ಅಭಿವೃದ್ಧಿಗೊಳಿಸುವ ಜತೆಗೆ ಮೂಲಸೌಕರ್ಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸೃಸಂಪದ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗೆ ಆಯ್ಕೆಯಾದ ಬಂದರುಗಳಿಗೆ 25 ಕೋಟಿ ರೂ. ಅನುದಾನ ದೊರೆಯಲಿದೆ. ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ಅನುದಾನ ಒದಗಿಸುತ್ತದೆ. ಮಾತ್ರವಲ್ಲದೆ ಈ ಯೋಜನೆಗೆ ಆಯ್ಕೆಯಾದ ಬಂದರುಗಳು ಭೌಗೋಳಿಕವಾಗಿ ಅಭಿವೃದ್ಧಿಗೊಳಿಸುವ ಜತೆಗೆ ಹೈಟೆಕ್ ವ್ಯವಸ್ಥೆಗಳ ಮೂಲಕ ಮೇಲ್ದರ್ಜೆಗೇರಲಿದೆ.
ಸ್ವಾತಂತ್ರೃ ಪೂರ್ವದಲ್ಲಿ ಬ್ರಿಟಿಷರು ವ್ಯಾಪಾರ ವಹಿವಾಟುಗಳಿಗೆ ಈ ಬಂದರನ್ನು ಅವಲಂಭಿಸಿದ ಐತಿಹ್ಯಗಳಿವೆ. 1970ರಲ್ಲಿ ನದಿ, ಸಾಗರ ಸಂಗಮದ ಈ ಪ್ರದೇಶದಲ್ಲಿ ಸರ್ಕಾರ ಬಂದರು ನಿರ್ಮಾಣ ಮಾಡಿತ್ತು. ನಿರ್ವಹಣೆ ಕೊರತೆಯಿಂದ ಬಂದರು, ಮಂಜುಗಡ್ಡೆ ಸ್ಥಾವರ, ಬಲೆ ನೇಯುವ ಕಟ್ಟಡ ಹಾಗೂ ಇತರ ವ್ಯವಸ್ಥೆ ಶಿಥಿಲಗೊಂಡಿತ್ತು. ಹತ್ತು ವರ್ಷ ಹಿಂದೆ ಬ್ರೇಕ್‌ವಾಟರ್ ನಿರ್ಮಾಣಕ್ಕೆ ಸುಮಾರು 9 ಕೋಟಿ ರೂ. ಅನುದಾನ ಹೊರತುಪಡಿಸಿದರೆ ಇತರ ಅನುದಾನ ಬಂದಿಲ್ಲ. ಔಟ್‌ಡೋರ್ ಬಂದರು, ಬ್ರೇಕ್‌ವಾಟರ್ ವಿಸ್ತರಣೆ, ಪಾತಿ ದೋಣಿಗಳ ನಿಲುಗಡೆ ಕೇಂದ್ರ ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು. ಈ ಬಂದರು ಅಭಿವೃದ್ಧಿಗೆ ಸರ್ಕಾರ ಅಪರೂಪಕ್ಕೊಮ್ಮೆ ಒಂದಿಷ್ಟು ಅನುದಾನ ಬಿಡುಗಡೆ ಮಾಡಿದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಹೀಗಾಗಿ ಮೀನುಗಾರಿಕೆಗೆ ಅತ್ಯುತ್ತಮ ಅವಕಾಶ ಇರುವ ಅಳ್ವೆಗದ್ದೆ ಬಂದರು ಹಲವು ಸಮಸ್ಯೆಗಳಿಂದ ಮೀನುಗಾರರು ತೊಂದರೆ ಅನುಭವಿಸುವಂತಾಗಿದೆ.
ಅಳ್ವೆಗದ್ದೆ ಬಂದರು ಜೆಟ್ಟಿ ಸುಧಾರಣೆ, ರಸ್ತೆ, ವಿದ್ಯುತ್ ವ್ಯವಸ್ಥೆ, ಮಂಜುಗಡ್ಡೆ ಸ್ಥಾವರ ಮುಂತಾದ ಅವಶ್ಯಕತೆಗಳಿವೆ. ಈಗಿರುವ ಜೆಟ್ಟಿಯನ್ನು ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ ವಿಸ್ತರಿಸಬೇಕಾಗಿದೆ. ಮತ್ಸೃಸಂಪದ ಯೋಜನೆ ಮಂಜೂರಾದರೆ ಸಂಪೂರ್ಣ ವ್ಯವಸ್ಥೆ ದೊರೆಯಲಿದೆ. ದೊಡ್ಡ ಬಂದರುಗಳಲ್ಲಿರುವ ಹರಾಜು ಕೊಠಡಿ ಇತರ ಅಗತ್ಯ ಸೌಕರ್ಯ ದೊರೆಯಲಿದೆ. 1500 ಸಾವಿರ ದೋಣಿಗಳಿದ್ದು, ಏಳು ಬೋಟ್ ನಿರ್ಮಾಣ ಕೇಂದ್ರಗಳಿವೆ. ಹೀಗಾಗಿ ಅಳ್ವೆಗದ್ದೆ ಬಂದರು ಮೇಲ್ದರ್ಜೆಗೇರುವ ಮೂಲಕ ಅಭಿವೃದ್ಧಿಗೊಂಡಲ್ಲಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಪರ್ಕದ ಪ್ರಮುಖ ಬಂದರಾಗಿ ಹೊರಹೊಮ್ಮಲಿದೆ ಎನ್ನುವುದು ಮೀನುಗಾರರ ಆಶಯ.
ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಈ ಭಾಗದಲ್ಲಿ ಸೀವಾಕ್ ನಿರ್ಮಿಸಿದರೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದು. ಸರ್ಕಾರ ಹಾಗೂ ಇಲಾಖೆ ಬಂದರಿನ ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡಿಲ್ಲ ಮತ್ತು ಸ್ಥಳೀಯ ಮೀನುಗಾರರ ಅಭಿಪ್ರಾಯ ಪಡೆದು ಕಾಮಗಾರಿ ನಿರ್ವಹಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಅಭಿವೃದ್ಧಿ ಕುರಿತು ಮನಸ್ಸು ಮಾಡಲಿ. -ಮೋಹನ ಕೆ. ಪೂಜಾರಿ ಅಳ್ವೆಗದ್ದೆ ಕಳೆದ ಬಾರಿ ಮಳೆಯ ರಭಸಕ್ಕೆ 60ಕ್ಕೂ ಮಿಕ್ಕಿ ಬೋಟ್‌ಗಳು ಕೊಚ್ಚಿ ಹೋಗಿದ್ದವು. ನೂರಾರು ಪಾತಿದೋಣಿಗಳು ತೇಲಿ ಹೋಗಿದ್ದವು. ಬಲೆ, ಇಂಜಿನ್‌ಗಳು ಸಮುದ್ರ ಪಾಲಾಗಿದ್ದವು. ಬೋಟ್ ನಿಲುಗಡೆಯ ಭಾಗ ಶಿಥಿಲಗೊಂಡಿತ್ತು. ಬೀದಿದೀಪ ಸಮಸ್ಯೆ, ಜೆಟ್ಟಿ ನಿರ್ಮಾಣ, ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ಯೋಜನೆಗಳು ಶೀಘ್ರ ಅನುದಾನ ದೊರೆತು ಕಾಮಗಾರಿ ಆರಂಭವಾದರೆ ಮೀನುಗಾರರ ಬದುಕು ಒಂದಿಷ್ಟು ಹಸನಾಗಬಹುದು. -ನಾಗೇಶ ಮೊಗೇರ್ ಅಳ್ವೆಗದ್ದೆ https://www.vijayavani.net/bhoomipooja-ceremony-for-road-development-work-in-maruti-nagar-udupi https://www.vijayavani.net/religious-awareness-through-srinivasa-kalyana