

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
30ನೇ ಆಳ್ವಾಸ್ ವಿರಾಸತ್‌ನಲ್ಲಿ ಉತ್ತರದ ಹಿಂದುಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳ ಸಿನಿಮಾ ಹಾಡುಗಳ ಇಂಪು, ಹಿಂದಿ ಹಾಡುಗಳ ಮಿಶ್ರಣ ಕೇಳಿಸಿತು.
-ಇದು ಆಳ್ವಾಸ್ ವಿರಾಸತ್‌ನ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಚೆನ್ನೈಯ ಸ್ಟೆಕೇಟೋ ಬ್ಯಾಂಡ್ ತಂಡವು ನಿರಂತರ ಅಬ್ಬರದಲ್ಲಿ ನಡೆಸಿಕೊಟ್ಟ ಸಂಗೀತ ರಸಸಂಜೆಯು ಕಾರ್ಯಕ್ರಮಕ್ಕೆ ರಂಗು ತುಂಬಿತು.
ಆರಂಭದಲ್ಲಿ ವಯೋಲಿನ್‌ನಲ್ಲಿ ಸಾಯಿ ರಕ್ಷಿತ್ ಅವರು ‘ರೋಜಾ ಜಾನೇ ಮನ್’ ನುಡಿಸುವ ಮೂಲಕ ಸಂಗೀತ ರಸ ಸಂಜೆಗೆ ನಾಂದಿ ಹಾಡಿದರು. ಗಾಯಕಿ ನಿರಂಜನಾ ರಮಣನ್, ‘ಜಿಯಾ ಝಲೇ ಜಾನ್ ಝಲೇ’ ಹಾಗೂ ಅದರ ತಮಿಳು ಅವತರಣಿಕೆಯ ಮಿಶ್ರಣ ಮಾಡಿ ಹಾಡಿದರು. ಪಸೂರಿ ಹಾಡನ್ನು ಗೌತಮ್ ಭಾರಧ್ವಾಜ್ ಹಾಗೂ ನಿರಂಜನಾ ರಮಣನ್ ಹಾಡಿದರು. ದೀಪಕ್ ಪುಷ್ಪ ಸಿನಿಮಾದ ‘ನೋಟ ಬಂಗಾರವಾಯಿತೇ ಶ್ರೀವಲ್ಲಿ ಮಾತೇ ಮಾಣಿಕ್ಯವಾಯಿತೆ’ ತೆಲುಗು ಹಾಡು ಹಾಡಿದರು.
ಪ್ರೇಕ್ಷಕರೆಲ್ಲ ಮೊಬೈಲ್ ಬೆಳಕನ್ನು ಬೀಸಿದಾಗ ಹೊಸ ಲೋಕ ಸೃಷ್ಟಿಯಾಯಿತು. ಪುನೀತ್ ರಾಜ್‌ಕುಮಾರ್ ಸ್ಮರಣೆಯ ‘ಗೊಂಬೆ ಹೇಳುತ್ತೈತೆ...’ ಹಾಡಿದಾಗ ಎಲ್ಲ ವೀಕ್ಷಕರು ಹಾಡಿಗೆ ಜೊತೆಯಾದರು. ಸುಮಾರು 75 ಸಾವಿರಕ್ಕೂ ಅಧಿಕ ಜನ ಹಿಡಿಯುವ ಸಭಾಂಗಣ ಕಿಕ್ಕಿರಿದು ತುಂಬಿತ್ತು.
ಸಂಸ್ಥಾಪಕರಾದ ಆರ್.ಎಚ್.ವಿಕ್ರಂ ಅವರ ಸಂಗೀತ ಸಂಯೋಜನೆ ಹಾಗೂ ಕೀ ಬೋರ್ಡ್‌ನಲ್ಲಿ ಶಲ್ಲು ವರುಣ್ (ಬೇಸ್ ಗಿಟಾರ್), ಅಭಿನಂದನ್ (ಗಿಟಾರ್ ವಾದಕ), ಸಂದೀಪ್ ರಮಣನ್ (ಡ್ರಮ್ಸ್), ಸೌರಭ್ ಜೋಶಿ (ವಾದ್ಯಮೇಳ ), ಸಾಯಿ ರಕ್ಷಿತ್ (ವಯೋಲಿನ್), ವಿಕ್ರಂ ಸಾರದಿ (ಕೀ ಬೋರ್ಡ್) ಹಾಗೂ ಹಾನೆಸ್ಟ್, ಶರತ್ ಹಾಗೂ ಗೋಕುಲ್ ಧ್ವನಿ ನಿರ್ವಹಣೆಯಲ್ಲಿ ಸಹಕರಿಸಿದರು. ‘ಎಲ್ಫೆ’ ಕೋರಸ್ ನೀಡಿತು.