

ಮೂಡುಬಿದಿರೆ: ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಹಾಗೂ ಮಾನವನ ಬುದ್ದಿಮತ್ತೆಯ ವ್ಯತ್ಯಾಸ ತಿಳಿಯಲು ಕಷ್ಟವಾಗಲಿದೆ. ಇದರಿಂದಾಗಿ ಮುಂದಕ್ಕೆ ಅನೇಕ ರೀತಿಯ ಅಪರಾಧಗಳು ಹೆಚ್ಚಾಗಲಿದೆ. ದೇಹದ ಸಮತೋಲನಕ್ಕೆ ಯೋಗ, ಮೆದುಳಿನ ಸೃಜನಶೀಲತೆಗೆ ಧ್ಯಾನ, ಪ್ರಾಣಾಯಾಮ, ಸರಿಯಾದ ಪ್ರಮಾಣದಲ್ಲಿ ಊಟ, ಸರಿಯಾದ ಸಮಯಕ್ಕೆ ನಿದ್ದೆ ಹಾಗೂ ಮಾಡುವ ಕಾರ್ಯದಲ್ಲಿ ಸಂಪೂರ್ಣ ಶ್ರದ್ಧೆ ಪಾಲಿಸುತ್ತಾನೋ ಆತ ಸಾಧನೆಯ ಮೆಟ್ಟಿಲುಗಳನ್ನು ಏರುವುದು ನಿಶ್ಚಿತ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ವೇಣುಗೋಪಾಲ್ ಕೆ.ಆರ್. ಹೇಳಿದರು.
ಮುಂಡ್ರುದೆಗುತ್ತು ಕೆ. ಅಮರನಾಥ್ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಡೆದ ಆಳ್ವಾಸ್ ತಾಂತ್ರಿಕ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
2023-24ನೇ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫನಾರ್ಂಡಿಸ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಗಣಿತ ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ ಕೊಳಕೆ ಸ್ವಾಗತಿಸಿದರು. ಪ್ರೊ.ದೀಕ್ಷಾ ಎಂ. ಕಾರ್ಯಕ್ರಮ ನಿರೂಪಿಸಿದರು. ಡೀನ್ ಡಾ.ದತ್ತಾತ್ರೇಯ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.