ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪದವಿ ಪ್ರದಾನ

Alvas graduation day
Alvas graduation day
Published on

ಮೂಡುಬಿದಿರೆ: ಒತ್ತಡ ರಹಿತ ಕಲಿಕೆಯಿಂದ ಯಶಸ್ಸು ಸಾಧ್ಯ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಎಸ್.ಅಬ್ದುಲ್ ನಜೀರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ 21ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಮಾತೆರೆಗ್ಲಾ ಎನ್ನ ನಮಸ್ಕಾರ’ ಎಂದು ಮಾತು ಆರಂಭಿಸಿದ ಅವರು, ಪದವಿ ಜೀವನದ ಸಾಧನೆಗಳ ಆರಂಭ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹೇಳಿದಂತೆ, ‘ನಿಮ್ಮ ಸಮಯ ಅಲ್ಪ. ಅದನ್ನು ಇನ್ನೊಬ್ಬರ ಬದುಕಿನಲ್ಲಿ ಕಾಲಹರಣ ಮಾಡಲು ಕಳೆಯಬೇಡಿ. ಇತರರ ಅಭಿಪ್ರಾಯಗಳು ನಿಮ್ಮ ಅಂತಃಸಾಕ್ಷಿಯ ಧ್ವನಿಯನ್ನು ಮುಳುಗಿಸದಿರಲಿ. ನಿಮ್ಮ ಮನಃಸಾಕ್ಷಿಯಂತೆ ಮುನ್ನಡೆಯಿರಿ’ ಎಂದರು.

ಇತರರಿಗೆ ಒಳಿತು ಮಾಡುವುದೇ ಶ್ರೇಷ್ಠ ಜೀವನ. ಇದಕ್ಕೆ ಡಾ.ಎಂ.ಮೋಹನ ಆಳ್ವ ಅವರೇ ಸ್ಫೂರ್ತಿ. ತನ್ನೂರಿನ ಜನತೆಗೆ ಅಗತ್ಯ ಆರೋಗ್ಯ ಸೌಲಭ್ಯ ದೊರಕಿಸುವ ಆಶಯದಿಂದ ಮೂಡುಬಿದಿರೆಯಲ್ಲಿ ಪುಟ್ಟ ಚಿಕಿತ್ಸಾಲಯದೊಂದಿಗೆ ವೃತ್ತಿ ಆರಂಭಿಸಿದರು. ಬಳಿಕ ಆರೋಗ್ಯ ಸೇವೆ ಜತೆಗೆ ಶಿಕ್ಷಣವನ್ನೂ ಆರಂಭಿಸಿದರು. ವಿಶೇಷ ಮಕ್ಕಳಿಗೆ ಉಚಿತ ಶಾಲೆ ಅವರ ಬಹುದೊಡ್ಡ ಸೇವೆ. ಪ್ರತೀ ವರ್ಷ ಮೂರು ಸಾವಿರಕ್ಕೂ ಅಧಿಕ ಮಕ್ಕಳಿಗೆ ದತ್ತು ಯೋಜನೆ ಮೂಲಕ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ನಜೀರ್ ಪತ್ನಿ ಸಮೀರಾ ನಜೀರ್ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು. ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ರೋಶನ್ ಪಿಂಟೋ ಪದವಿ ಘೋಷಣೆ ಮಾಡಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ರ‌್ಯಾಂಕ್ ವಿಜೇತರ ಹೆಸರು ವಾಚಿಸಿದರು. ಪ್ರಾಧ್ಯಾಪಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

2368 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 581, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 390 ಹಾಗೂ ಮಂಗಳೂರು ವಿಶ್ವವಿದ್ಯಾಲಯದ 1397 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2368 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 581, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 390 ಹಾಗೂ ಮಂಗಳೂರು ವಿಶ್ವವಿದ್ಯಾಲಯದ 1397 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2368 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಒತ್ತಡದ ಕಲಿಕೆಯೇ ಯಶಸ್ಸು ಎಂಬ ತಪ್ಪು ಗ್ರಹಿಕೆ ಹಲವು ವಿದ್ಯಾರ್ಥಿಗಳಲ್ಲಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಮೂರನೇ ಒಂದು ಭಾಗವನ್ನು ಒತ್ತಡದಲ್ಲಿ ಕಳೆಯುತ್ತಾರೆ. ಒತ್ತಡ ಕಲಿಕೆಯ ಭಾಗವಲ್ಲ. ಭಾರಿ ಕಲಿತಾಗ ಬಳಲುತ್ತೇವೆ ಎಂಬ ತಪ್ಪು ಕಲ್ಪನೆ ಕೆಲವು ವಿದ್ಯಾರ್ಥಿಗಳಲ್ಲಿ ಇದೆ. ಆದರೆ, ಆ ಮೂಲಕ ನೀವು ನಿಮ್ಮ ಕಲಿಕೆಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತೀರಿ. ಒತ್ತಡದ ಬಳಲಿಕೆಯು ನಿಮ್ಮ ಗುರಿ ಸಾಧನೆಯನ್ನು ವಿಫಲಗೊಳಿಸುತ್ತದೆ. ಕಡಿಮೆ ಒತ್ತಡದಲ್ಲೂ ಸಾಧನೆ ಮಾಡಬಹುದು.- ನ್ಯಾ.ಎಸ್.ಅಬ್ದುಲ್ ನಜೀರ್ ರಾಜ್ಯಪಾಲರು, ಆಂಧ್ರಪ್ರದೇಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net