

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪ್ರಭಾವಿ ಸಂವಹನವೇ ಇಂದಿನ ಸವಾಲು ಮತ್ತು ಅವಶ್ಯಕತೆ. ಕೃತಕ ಬುದ್ಧಿಮತ್ತೆ (ಎಐ) ಎಂಬುದು ಮಿಥ್ಯೆ ಅಲ್ಲ. ಔದ್ಯೋಗಿಕ ಬದುಕಿನ ಅನಿವಾರ್ಯತೆ ಎಂದು ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರ ಮುಖ್ಯಸ್ಥ ವಾಸುದೇವ ಕಾಮತ್ ಹೇಳಿದರು.
ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಾರ್ಷಿಕೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಸಾಂಸ್ಕೃತಿಕ, ಕ್ರೀಡೆ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಆಳ್ವಾಸ್, ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿಯಾಗಿದೆ. 1998ರಲ್ಲಿ ಆರಂಭಗೊಂಡ ಆಳ್ವಾಸ್ ಕಾಲೇಜಿನಲ್ಲಿ ಈವರೆಗೆ 68,401 ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ ಎಂದರು.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಆಳ್ವಾಸ್ ವೆಲ್‌ನೆಸ್ ಸೆಂಟರ್ ನಿರ್ದೇಶಕಿ ಡಾ.ದೀಪಾ ಕೊಠಾರಿ ಹೊರತಂದ ಕೈಪಿಡಿ ಬಿಡುಗಡೆ ಮಾಡಲಾಯಿತು.
ಬೆಂಗಳೂರಿನ ದಿಶಾ ಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ಕಾಲೇಜು ಕುಲಸಚಿವ(ಪರೀಕ್ಷಾಂಗ) ಕೆ.ನಾರಾಯಣ ಶೆಟ್ಟಿ, ಕುಲಸಚಿವ(ಶೈಕ್ಷಣಿಕ) ಟಿ.ಕೆ.ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.