

ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ಹಾಗೂ ಕರ್ನಾಟಕತ್ವದ ಕಲ್ಪನೆ ಇಲ್ಲದಿದ್ದ ಸಮಯದಲ್ಲಿ ಕನ್ನಡ ಕಂಪನ್ನು ಕರ್ನಾಟಕದ ಅಸ್ತಿತ್ವವನ್ನು ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು ವಿಶ್ವಕ್ಕೆ ಸಾರಿದರು ಎಂದು ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಡಾ. ದೀಪಕ್ ಆಲೂರ ಹೆಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ತೋಂಟದಾರ್ಯ ಮಠದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಿಂಚನ ಮಾಲಿಕೆಯಲ್ಲಿ ಮಾತನಾಡಿ, ಚದುರಿದ್ದ ಕರ್ನಾಟಕ ರಾಜ್ಯವನು ಏಕೀಕರಣ ಹೋರಾಟದ ಮೂಲಕ ಒಂದುಗೂಡಿಸುವಲ್ಲಿ ಶ್ರಮಿಸಿದ ಅನೇಕ ಮಹನೀಯರಲ್ಲಿ ವೆಂಕಟರಾಯರು ಕೂಡ ಒಬ್ಬರು. ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯಕ್ಕಾಗಿ ವಕೀಲಿ ವೃತ್ತಿಯನ್ನು ಬಿಟ್ಟು ಕರ್ನಾಟಕ ನೂತನ ವಿದ್ಯಾಲಯವೆಂಬ ರಾಷ್ಟ್ರೀಯ ಶಾಲೆಯನ್ನು ಆರಂಭಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂದ ಮುಖವಾಣಿಯಾಗಿದ್ದ ವಾಗ್ಭೂಷಣ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ತಿಳಿಸಿದರು ಎಂದರು.
ಅಧ್ಯತೆ ವಹಿಸಿ ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಡಾ.ಬಿ.ಎಸ್. ರಾಠೋಡ ಇವರಿಂದ ಸ್ವರಚಿತ ಕವನಗಳ ವಾಚನ ನಡೆಯಿತು. ಡಾ. ಪ್ರಭು ಗಂಜಿಹಾಳ. ಶಿವಾನಂದ ಗಿಡ್ನಂದಿ ಪ್ರೊ. ಕಿಶೋರಬಾಬು ನಾಗರಕಟ್ಟಿ, ಡಾ. ದತ್ತಪ್ರಸನ್ನ ಪಾಟೀಲ ಉಪಸ್ಥಿತರಿದ್ದರು.